ರಾಜಸ್ಥಾನ: ಪಾಕ್ ವಲಸಿಗರ ಕುಟುಂಬದ 11 ಮಂದಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Update: 2020-08-09 09:25 GMT

ಜೋಧಪುರ, ಆ.9: ಪಾಕಿಸ್ತಾನ ಹಿಂದೂ ವಲಸಿಗರ ಕುಟುಂಬದ ಹನ್ನೊಂದು ಸದಸ್ಯರು ರವಿವಾರ ಬೆಳಗ್ಗೆ ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಜಮೀನಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬದ ವ್ಯಕ್ತಿಯೊಬ್ಬ ಜೀವಂತವಾಗಿದ್ದು, ಗುಡಿಸಲಿನ ಹೊರಗೆ ಕಂಡುಬಂದಿದ್ದಾನೆ. ಈ ಕುಟುಂಬವು ಡೆಚು ಪ್ರದೇಶದ ಲೊಡ್ಟಾ ಹಳ್ಳಿಯಲ್ಲಿ ವಾಸಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

"ಘಟನೆಗೆ ಕಾರಣ ಏನೆಂದು ನನಗೆ ಗೊತ್ತಿಲ್ಲ. ರಾತ್ರಿ ವೇಳೆ ಈ ಘಟನೆ ನಡೆದಿರಬಹುದು ಎಂದು ಜೀವಂತವಾಗಿರುವ ಕುಟುಂಬದ ಸದಸ್ಯನೊಬ್ಬನು ಹೇಳಿದ್ದಾನೆ" ಎಂದು ಪೊಲೀಸ್ ಎಸ್ಪಿ(ಗ್ರಾಮೀಣ)ರಾಹುಲ್ ಭರತ್ ಹೇಳಿದ್ದಾರೆ.

ಸಾವಿಗೆ ಕಾರಣವನ್ನು ಇನ್ನಷ್ಟೇ ದೃಢಪಡಿಸಿಕೊಳ್ಳಬೇಕಾಗಿದೆ. ರಾತ್ರಿ ವೇಳೆ ಕುಟುಂಬದ ಸದಸ್ಯರು ಯಾವುದೋ ರಾಸಾಯನಿಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುಡಿಸಲಿನಲ್ಲಿ ಕೆಮಿಕಲ್‌ನ ವಾಸನೆ ಬರುತ್ತಿತ್ತು. ಹೀಗಾಗಿ ಎಲ್ಲರೂ ಏನೋ ಸೇವಿಸಿರುವುದು ಗೊತ್ತಾಗಿದೆ. ಮೃತದೇಹಗಳ ಮೇಲೆ ಯಾವುದೆ ಗುರುತಿಲ್ಲ ಎಂದು ರಾಹುಲ್ ತಿಳಿಸಿದರು.

ಕುಟುಂಬದ ಎಲ್ಲ ಸದಸ್ಯರುಗಳು ಪಾಕಿಸ್ತಾನದ ಭಿಲ್ ಸಮುದಾಯಕ್ಕೆ ಸೇರಿದವರಾಗಿದ್ದು, ಹಳ್ಳಿಯ ಜಮೀನಿನಲ್ಲಿ ವಾಸವಾಗಿದ್ದರು. ಅಲ್ಲಿ ಅವರು ಕೆಲಸ ಮಾಡುತ್ತಿದ್ದರು. ಕೆಲವೊಂದು ವಿಷಯಕ್ಕೆ ಕುಟುಂಬದಲ್ಲಿ ವಿವಾದವಿತ್ತು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News