ಜಾಮಿಯಾ ವಿವಿ ವಿದ್ಯಾರ್ಥಿಗಳ ಸಾಫ್ಟ್ ವೇರ್ ಗೆ ‘ಸ್ಮಾರ್ಟ್ ಇಂಡಿಯಾ’ ಹ್ಯಾಕಥಾನ್ ಪ್ರಶಸ್ತಿ

Update: 2020-08-09 09:33 GMT

ಹೊಸದಿಲ್ಲಿ: ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಆರು ಮಂದಿ ವಿದ್ಯಾರ್ಥಿಗಳ ‘ಮಾಂಕ್ಸ್’ ತಂಡವು ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‍ ನ ಸಾಫ್ಟ್‍ವೇರ್ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿದೆ. ವಿವಿಯ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ವಿಭಾಗದ ವಿದ್ಯಾರ್ಥಿಗಳು ಒಂದು ಲಕ್ಷ ರೂಪಾಯಿ ಬಹುಮಾನ ಗೆದ್ದಿದಾರೆ.

ಈ ತಂಡ ಮುಂದಿನ ವರ್ಷದ ಬೆಳೆಯನ್ನು ಅಂದಾಜಿಸುವ ಸಾಫ್ಟ್‍ ವೇರ್ ಅಭಿವೃದ್ಧಿಪಡಿಸಿದ್ದು, ಅನಾವೃಷ್ಟಿ ಮತ್ತು ಅತಿವೃಷ್ಟಿ ಸಮಸ್ಯೆಯನ್ನು ಅಂದಾಜಿಸಿ, ಅದಕ್ಕೆ ತಕ್ಕಂತೆ ತನ್ನ ನೀತಿಗಳನ್ನು ರೂಪಿಸಲು ಇದು ಸರ್ಕಾರಕ್ಕೆ ನೆರವಾಗಲಿದೆ.

ಪ್ರತಿ ವರ್ಷ ಪ್ರವಾಹ ಸಮಸ್ಯೆ ಎದುರಿಸುತ್ತಿರುವ ಬಿಹಾರ ಸರ್ಕಾರ ಈ ತಂಡಕ್ಕೆ ಸಮಸ್ಯೆಯ ಹೇಳಿಕೆಯನ್ನು ನೀಡಿತ್ತು. ಈ ಸಮಸ್ಯೆಯನ್ನು ವಿದ್ಯಾರ್ಥಿಗಳ ತಂಡ ಕೇವಲ 36 ಗಂಟೆಗಳಲ್ಲಿ ಬಗೆಹರಿಸಿದೆ. ಮಾಂಕ್ ತಂಡದ ಜತೆಗೆ ಜಾಮಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದ ಮೂರು ತಂಡಗಳು ಅಂತಿಮ ಹಂತ ತಲುಪಿದರೂ ಪ್ರಶಸ್ತಿ ಗೆಲ್ಲಲಾಗಲಿಲ್ಲ.

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‍ ನ ಅಂತಿಮ ಸುತ್ತಿನ ಸ್ಪರ್ಧೆಗೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಸಾಕ್ಷಿಯಾಗಿದ್ದರು. ನಮ್ಮ ಯುವಕರು ಬಗೆಹರಿಸಲಾಗದ ಸಮಸ್ಯೆಗಳೇ ಇಲ್ಲ ಎಂದು ಮೋದಿ ಹೇಳಿದ್ದರು.

ಪ್ರೊಫೆಸರ್ ತನ್ವೀರ್ ಅಹ್ಮದ್ ಮಾರ್ಗದರ್ಶನದಲ್ಲಿ ‘ಮಾಂಕ್’ ತಂಡವು ಕೆಲಸ ಮಾಡಿತ್ತು. ತಂಡದಲ್ಲಿ ಗೌರವ್ ಚೌಧರಿ, ಪ್ರಣವ್ ಗೌತಮ್, ನೀತೇಶ್ ಕೌಶಿಕ್, ಲಕ್ಷ್ಯ ಚೌಧರಿ, ಆಶಿಶ್ ಸಿಂಗ್ ಮತ್ತು ನಶ್ರಾ ನಸೀಮ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News