ಗಾಯಗೊಂಡಿದ್ದ ಮಕ್ಕಳನ್ನು ಸ್ಥಳೀಯರು ತಮ್ಮ ಮಕ್ಕಳಂತೆ ಆರೈಕೆ ಮಾಡಿದರು: ವೈದ್ಯರಿಂದ ಪ್ರಶಂಸೆ

Update: 2020-08-09 12:09 GMT

ಕೋಝಿಕ್ಕೋಡ್: ಶುಕ್ರವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ ಉಳಿದುಕೊಂಡ ಆರು ಮಕ್ಕಳನ್ನು ಸ್ಥಳೀಯ ಬೇಬಿ ಸ್ಮಾರಕ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರಿಹಾರ ತಂಡದಲ್ಲಿದ್ದ ಹಲವು ಮಂದಿ ಸ್ಥಳೀಯರು ಈ ಮಕ್ಕಳ ಕುಟುಂಬದ ಸದಸ್ಯರನ್ನು ಗುರುತಿಸುವಲ್ಲಿ ನೆರವಾದರು ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಈ ಆರು ಮಂದಿ ಮಕ್ಕಳು 2 ರಿಂದ 11 ವರ್ಷ ವಯಸ್ಸಿನವರಾಗಿದ್ದು, ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. “ಸ್ಥಳೀಯರಿಗೆ ಕೃತಜ್ಞತೆ ಸಲ್ಲಿಸಲೇಬೇಕು. ಅವರು ಈ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಂಡರು. ಯಾವ ಮಕ್ಕಳೂ ತಮ್ಮ ಹೆಸರು ಅಥವಾ ಪೋಷಕರ ಹೆಸರು ಹೇಳುವ ಸ್ಥಿತಿಯಲ್ಲಿರಲಿಲ್ಲ. ಅವರ ಪಾಸ್‍ ಪೋರ್ಟ್ ಕೂಡಾ ಇರಲಿಲ್ಲ” ಎಂದು ಮಕ್ಕಳ  ತಜ್ಞ ಡಾ.ಅಜಯ್ ವಿವರಿಸಿದರು.

ಈ ಎಲ್ಲ ಮಕ್ಕಳನ್ನೂ ಪರಿಹಾರ ತಂಡ ಆಸ್ಪತ್ರೆಗೆ ಕರೆತಂದಿದ್ದು, ಕುಟುಂಬದವರು ಇರಲಿಲ್ಲ. ಇದು ನಮಗೆ ನಿಜಕ್ಕೂ ಸವಾಲಾಗಿತ್ತು. ಅವರ ಕುಟುಂಬದ ಸದಸ್ಯರನ್ನು ಗುರುತಿಸಲು ಸ್ಥಳೀಯರು ನೆರವಾದರು. ಸ್ವಯಂಸೇವಕರು ಮಕ್ಕಳ ಫೋಟೊಗಳನ್ನು ವಾಟ್ಸಪ್‍ ನಲ್ಲಿ ಶೇರ್ ಮಾಡಿ ಮೂರು ನಾಲ್ಕು ಗಂಟೆಗಳಲ್ಲಿ ಎಲ್ಲರ ಕುಟುಂಬದವರನ್ನೂ ಪತ್ತೆ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.

ಇಬ್ಬರು ಪೈಲಟ್‍ ಗಳು ಸೇರಿದಂತೆ 19 ಮಂದಿ ದುರಂತದಲ್ಲಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News