4 ತಿಂಗಳುಗಳಿಂದ ಕೊರೋನ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಕಾಶ್ಮೀರದ ವೈದ್ಯ ಅದೇ ಸೋಂಕಿಗೆ ಬಲಿ

Update: 2020-08-09 15:00 GMT

ಶ್ರೀನಗರ: ಸುಮಾರು 4 ತಿಂಗಳುಗಳಿಂದ ಕೊರೋನ ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ಕಾಶ್ಮೀರದ ವೈದ್ಯರೊಬ್ಬರು ಇಂದು ಅದೇ ವೈರಸ್ ಗೆ ಬಲಿಯಾಗಿದ್ದಾರೆ.

ನಾಲ್ಕು ತಿಂಗಳುಗಳಿಂದ ಡಾ. ಮುಹಮ್ಮದ್ ಅಶ್ರಫ್ ಮೀರ್, ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಅವರಿಗೆ ಕೊರೋನ ಸೋಂಕು ದೃಢಪಟ್ಟ ಬಳಿಕ ಶ್ರೀನಗರದ ಶೇರೆ ಕಾಶ್ಮೀರ್ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ಅವರು ಕೊನೆಯುಸಿರೆಳೆದಿದ್ದಾರೆ.

ಮುಹಮ್ಮದ್ ಅಶ್ರಫ್ ನಿಧನಕ್ಕೆ ಕಾಶ್ಮೀರದಾದ್ಯಂತ ಜನರು ಕಂಬನಿ ಮಿಡಿದಿದ್ದು, ಅವರ ಸೇವೆಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

ಕಾಶ್ಮೀರದಲ್ಲಿ ಕಳೆದ 24 ಗಂಟೆಯಲ್ಲಿ 463 ಹೊಸ ಕೊರೋನ ಪ್ರಕರಣಗಳು ವರದಿಯಾಗಿವೆ ಎಂದು ಇಂದು ಬೆಳಗ್ಗಿನ(ರವಿವಾರ) ದತ್ತಾಂಶ ಹೇಳಿದೆ. ಇವರಲ್ಲಿ 382 ಮಂದಿ ಕಾಶ್ಮೀರದವರು ಹಾಗೂ ಉಳಿದವರು ಇತರ ಪ್ರದೇಶದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಶ್ಮೀರದಲ್ಲಿ 470 ಸಾವಿನ ಪ್ರಕರಣ ಸೇರಿದಂತೆ ಒಟ್ಟು 24,000 ಕೋರೋನ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಇಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳು ಸುಮಾರು 7,000. ಕಥುವಾದ ಲಖಿಮ್‌ಪುರದ ಮೂಲಕ ಈ ವಲಯಕ್ಕೆ ಪ್ರವೇಶಿಸುವ ಜನರಲ್ಲಿ ಕೊರೋನ ಸೋಂಕು ಪತ್ತೆ ಹಚ್ಚಲು ಆಡಳಿತ ಆರ್‌ಎಟಿ (ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್) ಅನ್ನು ಪರಿಚಯಿಸಿದೆ ಎಂದು ಮುಖ್ಯ ವೈದ್ಯಾಧಿಕಾರಿ ಅಶೋಕ್ ಚೌಧರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News