ದ.ಕ.: ಮುಂದುವರಿದ ಮುಂಗಾರು ಮಳೆ, ವಿವಿಧೆಡೆ ಅಪಾರ ಹಾನಿ

Update: 2020-08-09 17:04 GMT

ಮಂಗಳೂರು, ಆ.9: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯು ರವಿವಾರವೂ ಮುಂದುವರಿದಿದೆ. ಮುಂಗಾರು ಋತುವಿನ ಭಾರೀ ಮಳೆಗೆ ದ.ಕ. ಜಿಲ್ಲೆಯ ಎಲ್ಲ ನದಿಗಳು ಧುಮ್ಮಿಕ್ಕಿ ಹರಿಯುತ್ತಿವೆ. ಉಳ್ಳಾಲ, ಸುರತ್ಕಲ್, ಬೈಕಂಪಾಡಿ, ತಣ್ಣೀರು ಬಾವಿಯಲ್ಲಿ ಕಡಲ್ಕೊರೆತ ಮುಂದುವರಿದಿದೆ. ಜಿಲ್ಲೆಯ ವಿವಿಧೆಡೆ ಅಪಾರ ಹಾನಿ ಸಂಭವಿಸಿದೆ.

ಉಳ್ಳಾಲದ ಬಂಗೇರ ಲೇನ್‌ನಲ್ಲಿ ಮನೆ ಆವರಣ ಗೋಡೆ ಕುಸಿದು ಹಾನಿ ಸಂಭವಿಸಿದೆ. ಪರಿಣಾಮ ಆವರಣ ಗೋಡೆಯ ಕಲ್ಲು ಬಿದ್ದಿದ್ದು ರಾಜಕಾಲುವೆಯ ಹರಿಯುವ ಮಳೆನೀರಿಗೆ ಅಡ್ಡಿಯಾದ ಘಟನೆ ನಡೆದಿದೆ.

ಇದರಿಂದ ಕಾಲುವೆಯಿಂದ ಹೊರಬಂದ ಮಳೆನೀರು ಸಮೀಪದ ಹಲವು ಮನೆಗಳಿಗೆ ನುಗ್ಗಿತು. ಇದರಿಂದ ಸ್ಥಳೀಯರು ಆತಂಕಗೊಂಡಿದ್ದರು. ಘಟನೆಯು ಬೆಳಗ್ಗೆ ಸಂಭವಿಸಿದೆ. ಜೆಸಿಬಿ ಯಂತ್ರ ಬಳಸಿ ಕಾಲುವೆಯನ್ನು ದುರಸ್ತಿಗೊಳಿಸಲಾಯಿತು. ಬಳಿಕವೇ ಕಾಲುವೆಯಲ್ಲಿನ ಮಳೆನೀರು ಹರಿವು ಹತೋಟಿಗೆ ಬಂದಿತು. ಸ್ಥಳಕ್ಕೆ ನಗರಸಭಾ ಪೌರಾಯುಕ್ತ ರಾಯಪ್ಪ, ಕೌನ್ಸಿಲರ್ ನಮಿತಾ ಗಟ್ಟಿ ಭೇಟಿ ನೀಡಿದ್ದರು.

ಮಂಗಳೂರಿನ ಹೊರವಲಯದ ಬಜ್ಪೆಯ ಸುತ್ತಮುತ್ತಲೂ ಧಾರಾಕಾರ ಮಳೆ ಸುರಿದಿದೆ. ಇದರಿಂದ ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಳವೂರು ಹಿಂದೂ ರುದ್ರಭೂಮಿ ಕಂಪೌಂಡ್ ಕುಸಿದು ಬಿದ್ದಿದೆ. ಅಲ್ಲದೆ, ಕುಳವೂರು ಗ್ರಾಮದ ಕುದ್ರಾಡಿ ಎಂಬಲ್ಲಿ ಅಣೆಕಟ್ಟಿನ ಸಮೀಪದ ತೋಡು ಕುಸಿದು ಕೃಷಿ ಭೂಮಿಗೆ ನೀರು ನುಗ್ಗಿ ಅಪಾರ ಹಾನಿಯುಂಟಾಗಿದೆ.

ಬಜಾಲ್ ಸಮೀಪದ ಜಲ್ಲಿಗುಡ್ಡೆ ಆದರ್ಶನಗರದಲ್ಲಿ ಮಧ್ಯಾಹ್ನ 12:30ರ ಸುಮಾರಿಗೆ ಗುಡ್ಡ ಜರಿದು ಮನೆಯೊಂದು ಭಾಗರ್ಶ ಹಾನಿಯಾಗಿದೆ. ಈ ಮನೆ ಹರೀಶ್ ಎಂಬವರಿಗೆ ಸೇರಿದೆ. ಸ್ಥಳೀಯ ಸಂಘಟನೆಯ ನೆರವಿನಿಂದ ಮಣ್ಣನ್ನು ತೆರವುಗೊಳಿಸಲಾಯಿತು.

ಪ್ರಕ್ಷುಬ್ಧ ವಾತಾವರಣ: ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣ ಏರ್ಪಟ್ಟಿದ್ದು, ರಾಜ್ಯದ ಕರಾವಳಿಯಲ್ಲಿ 50-60 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಲಿದೆ. ಮಂಗಳೂರಿನಿಂದ ಕಾರವಾರದವರೆಗೆ 3.5ರಿಂದ 4 ಮೀಟರ್ ಎತ್ತರದಲ್ಲಿ ಸಮುದ್ರದ ಅಲೆಗಳು ಆರ್ಭಟಿಸುತ್ತಿವೆ. ಇದೇ ಪರಿಸ್ಥಿತಿಯು ಆ.10ರಂದು ರಾತ್ರಿ 11:30ರವರೆಗೂ ಇರಲಿದೆ. ಮೇಲ್ಮೈ ಗಾಳಿಯ ವೇಗವು ಸೆಕೆಂಡ್‌ಗೆ 22-62 ಸೆಂ.ಮೀ.ವರೆಗೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ: ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಮುಂದಿನ ನಾಲ್ಕು ದಿನಗಳವರೆಗೆ ಭಾರೀ ಮಳೆ ಬೀಳುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆಯು ದ.ಕ. ಜಿಲ್ಲೆಯಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಿದೆ.

ಜಿಲ್ಲೆಯಲ್ಲಿ ವಾರದಿಂದ ವ್ಯಾಪಕ ಮಳೆ ಸುರಿಯುತ್ತಿದ್ದು, ಇನ್ನು ಹಲವು ದಿನಗಳವರೆಗೆ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಆ.10ರವರೆಗೆ ‘ಆರೆಂಜ್ ಅಲರ್ಟ್’ ಮುಂದುವರಿಯಲಿದೆ. ಆ.11ರಿಂದ 13ರವರೆಗೆ ‘ಯೆಲ್ಲೋ ಅಲರ್ಟ್’ ಇರಲಿದೆ.

ಸಾರ್ವಜನಿಕರು ನದಿ/ಸಮುದ್ರಕ್ಕೆ ಇಳಿಯದಂತೆ ಎಚ್ಚರದಿಂದ ಇರಬೇಕು. ಮಕ್ಕಳು, ಸಾರ್ವಜನಿಕರು ಅಪಾಯಕಾರಿ ವಿದ್ಯುತ್ ಕಂಬ/ ಕಟ್ಟಡ/ ಮರಗಳ ಕೆಳಗೆ ನಿಲ್ಲದೆ ಸುರಕ್ಷಿತ ಸ್ಥಳಗಳನ್ನು ತಲುಪಬೇಕು. ಎಲ್ಲ ಜಿಲ್ಲಾ/ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಕೇಂದ್ರ ಸ್ಥಾನದಲ್ಲಿ ರಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

1077 ಕರೆ ಮಾಡಿ: ಜಿಲ್ಲೆಯಲ್ಲಿನ ಪ್ರಾಕೃತಿಕ ವಿಕೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿಗೆ ಜಿಲ್ಲಾಡಳಿತದ ಟೋಲ್ ಫ್ರೀ ನಂ.1077 ಅಥವಾ 9483908000 (ವಾಟ್ಸ್‌ಆ್ಯಪ್)ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ದ.ಕ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ಹೆಚ್ಚು ಮಳೆ ಬಿದ್ದ ಪ್ರದೇಶ

ಉಡುಪಿಯ ಕೋಟ 16 ಸೆಂ.ಮೀ., ದ.ಕ. ಜಿಲ್ಲೆಯ ಮುಲ್ಕಿ, ಮಾಣಿ ತಲಾ 12 ಸೆಂ.ಮೀ., ಕುಂದಾಪುರ, ಮಂಗಳೂರು ಎ.ಪಿ. ತಲಾ 11 ಸೆಂ.ಮೀ., ಮೂಡುಬಿದಿರೆ 10 ಸೆಂ.ಮೀ., ಕಾರ್ಕಳ, ಸಿದ್ದಾಪುರ, ಬ್ರಹ್ಮಾವರ ಎಡಬ್ಲುಎಸ್ ತಲಾ ಒಂಬತ್ತು ಸೆಂ.ಮೀ., ಪಣಂಬೂರು, ಮಂಗಳೂರು, ಉಪ್ಪಿನಂಗಡಿ ತಲಾ ಎಂಟು ಸೆಂ.ಮೀ., ಪುತ್ತೂರು ಏಳು ಸೆಂ.ಮೀ., ಧರ್ಮಸ್ಥಳ, ಸುಬ್ರಹ್ಮಣ್ಯ ತಲಾ ಐದು ಸೆಂ.ಮೀ. ಮಳೆಯಾಗಿದೆ.

ಮಂಗಳೂರು: ಕಾಳಜಿ ಕೇಂದ್ರದಲ್ಲಿ 185 ನೆರೆ ಸಂತ್ರಸ್ತರು

ದ.ಕ. ಜಿಲ್ಲೆಯಲ್ಲಿನ ನದಿಗಳು ತುಂಬಿ ಹರಿಯುತ್ತಿವೆ. ನೇತ್ರಾವತಿ, ಗುರುಪುರ ನದಿಯ ಹರಿವಿನಲ್ಲಿ ಭಾರೀ ಏರಿಕೆಯಾದ ಪರಿಣಾಮ ಹಲವು ಗ್ರಾಮಗಳು ಸಂಪೂರ್ಣ ಮುಳುಗಡೆ ಹಂತದಲ್ಲಿವೆ. ಮಂಗಳೂರು ನಗರದ ಪುರಭವನ, ಬೈಕಂಪಾಡಿ, ಆರ್ಯ ಮರಾಠ ಸಭಾಭವನ, ಕೂಳೂರಿನಲ್ಲಿನ ನಾಲ್ಕು ಕಾಳಜಿ ಕೇಂದ್ರಗಳಲ್ಲಿ 185 ನೆರೆ ಸಂತ್ರಸ್ತರಿಗೆ ವ್ಯವಸ್ಥೆ ಕೈಗೊಳ್ಳಲಾಗಿದೆ.

ಹೊಯ್ಗೆಬಝಾರ್‌ನ 45 ಮಂದಿಯನ್ನೊಳಗೊಂಡ 15 ಕುಟುಂಬಗಳನ್ನು ನಗರದ ಪುರಭವನಕ್ಕೆ ಸ್ಥಳಾಂತರಿಸಲಾಗಿದೆ. ಜೆಪ್ಪಿನಮೊಗರು, ಅತ್ತಾವರದಿಂದ 65 ಮಂದಿಯನ್ನು ಕಾಳಜಿ ಕೇಂದ್ರಗಳಿಗೆ ಕರೆದೊಯ್ಯಲಾಗಿದೆ. ನಾಲ್ಕು ಕಾಳಜಿ ಕೇಂದ್ರಗಳಲ್ಲಿ ಒಟ್ಟು 185 ಮಂದಿಗೆ ಜಿಲ್ಲಾಡಳಿತದಿಂದ ಆಶ್ರಯ ನೀಡಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ನೆರೆ ಸಂತ್ರಸ್ತರಿಗೆ ಬೆಳಗ್ಗಿನ ಉಪಾಹಾರ, ಊಟ, ಹೊದಿಕೆ ಕಲ್ಪಿಸಲಾಗಿದೆ. ಜೊತೆಗೆ ಸಂತ್ರಸ್ತರಿಗೆ ನಿರಂತರ ಆರೋಗ್ಯ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದ್ದಾರೆ.

ನೂತನ ಕಾಳಜಿ ಕೇಂದ್ರ ಸಿದ್ಧತೆ: ಕರಾವಳಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ವಿವಿಧೆಡೆ ಸರ್ವ ವ್ಯವಸ್ಥೆಯನ್ನೊಳಗೊಂಡ ಕಾಳಜಿ ಕೇಂದ್ರ ತೆರೆಯಲಾಗಿದೆ. ಈ ಭಾಗದಲ್ಲಿ ನೆರೆ ಉಂಟಾದಲ್ಲಿ ಇವುಗಳನ್ನು ಬಳಸುವ ಉದ್ದೇಶ ಹೊಂದಲಾಗಿದೆ. ಸೋಮೇಶ್ವರದ ಭೋವಿ ಶಾಲೆ, ಸೋಮೇಶ್ವರ ಪುರಸಭೆಯ ಸಭಾಭವನ, ಉಳ್ಳಾಲ ದರ್ಗಾದ ಸಭಾಭವನ, ಸಂತ ಸೆಬಾಸ್ಟಿಯನ್ ಚರ್ಚ್ ಸಭಾಭವನಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News