ದ.ಕ. ಜಿಲ್ಲೆಯ 102 ಗ್ರಾಮಗಳಲ್ಲಿ ಪ್ರಾಕೃತಿಕ ವಿಕೋಪ ಭೀತಿ : ವಿಪತ್ತು ನಿರ್ವಹಣಾ ಸಮಿತಿ ರಚನೆ

Update: 2020-08-09 17:06 GMT

ಮಂಗಳೂರು, ಆ.9: ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ 102 ಗ್ರಾಮಗಳಲ್ಲಿ ನೆರೆ ಅಥವಾ ಭೂ ಕುಸಿತದಂತಹ ಪ್ರಾಕೃತಿಕ ವಿಕೋಪದ ಭೀತಿ ಎದುರಾಗಿವೆ. ದ.ಕ.ಜಿಪಂ ಆಡಳಿತವು ಜಿಲ್ಲೆಯ 102 ಗ್ರಾಮಗಳನ್ನು ಗುರುತಿಸಿ ಅತೀ ಸೂಕ್ಷ್ಮ ಗ್ರಾಮಗಳ ಪಟ್ಟಿಯಲ್ಲಿ ಸೇರಿಸಿದೆ.

ಕಳೆದ ತಿಂಗಳು ಗುರುಪುರದಲ್ಲಿ ಸಂಭವಿಸಿದ ಭೂ ಕುಸಿತದಿಂದ ಇಬ್ಬರು ಮಕ್ಕಳ ಜೀವಂತ ಸಮಾಧಿಯಾದ ಬಳಿಕ ಮತ್ತು ಎಡೆಬಿಡದೆ ಸುರಿಯುವ ಮಳೆಯ ಹಿನ್ನೆಲೆಯಲ್ಲಿ ದ.ಕ.ಜಿಪಂ ನೆರೆ ಹಾಗೂ ಭೂಕುಸಿತದ ಅಪಾಯ ಎದುರಿಸಬಹುದಾದ ಗ್ರಾಮಗಳನ್ನು ಗುರುತಿಸಿ ಅಗತ್ಯ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಯಾ ಗ್ರಾಪಂಗಳಿಗೆ ಸೂಚನೆ ನೀಡಿದೆ. ಅದರಂತೆ ಈ ಗ್ರಾಮ ವ್ಯಾಪ್ತಿಯನ್ನು ಹೊಂದಿರುವ ಜಿಲ್ಲೆಯ 70 ಗ್ರಾಪಂಗಳಲ್ಲಿ ವಿಪತ್ತು ನಿರ್ವಹಣಾ ಯೋಜನೆ ಅನುಷ್ಠಾನಕ್ಕಾಗಿ ಗ್ರಾಪಂ ವಿಪತ್ತು ನಿರ್ವಹಣಾ ಸಮಿತಿಯನ್ನು ರಚಿಸಲಾಗಿದ್ದು, ಯಾವುದೇ ಅನಾಹುತ ಎದುರಾಗದಂತೆ ಎಚ್ಚರಿಕೆ ವಹಿಸಲು ನಿರ್ದೇಶನ ನೀಡಲಾಗಿದೆ.

ಚುನಾಯಿತ ಪ್ರತಿನಿಧಿಗಳ ಅವಧಿ ಪೂರ್ಣಗೊಂಡಿರುವ ಗ್ರಾಪಂಗಳಿಗೆ ಜಿಲ್ಲಾಧಿಕಾರಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ಹಾಗಾಗಿ ಆಡಳಿತಾಧಿಕಾರಿಗಳ ಅಧ್ಯಕ್ಷತೆಯಲ್ಲಿಯೇ ವಿಪತ್ತು ನಿರ್ವಹಣಾ ಸಮಿತಿ ಕಾರ್ಯನಿರ್ವಹಿಸಲಿದೆ. ಸಮಿತಿ ಸದಸ್ಯರಾಗಿ ಆಡಳಿತಾಧಿಕಾರಿಗೆ ಸೂಕ್ತವೆನಿಸುವ ಸ್ಥಳೀಯ ಸಮುದಾಯದ 2 ಪ್ರತಿನಿಧಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ), ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು, ಶಾಲಾ ಮುಖ್ಯಶಿಕ್ಷಕರು, ಪೊಲೀಸ್ ಉಪನಿರೀಕ್ಷಕರು, ಕೃಷಿ ಸಹಾಯಕರು ಹಾಗೂ ಗ್ರಾಮ ಲೆಕ್ಕಿಗರು ಸಮಿತಿಯ ಸದಸ್ಯರಾಗಿ ಇರಲಿದ್ದಾರೆ. ಈ ತಂಡಕ್ಕೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಯೋಜನೆ ತಂಡದಿಂದ ತರಬೇತಿ ನೀಡಿ ಗ್ರಾಮಗಳಲ್ಲಿ ಅನಾಹುತಗಳಾದರೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ.

ಮಳೆಯಿಂದ ನೆರೆ ಅಥವಾ ಭೂ ಕುಸಿತಗೊಳ್ಳುವ ಸಾಧ್ಯತೆಯಿರುವ ದ.ಕ. ಜಿಲ್ಲೆಯ 102 ಅತೀ ಸೂಕ್ಷ್ಮ ಗ್ರಾಮಗಳನ್ನು ಗುರುತಿಸಲಾಗಿವೆ. ಇವುಗಳು 70 ಗ್ರಾಪಂ ವ್ಯಾಪ್ತಿಯಲ್ಲಿದ್ದು, ಆಯಾ ಗ್ರಾಪಂಗಳಲ್ಲಿ ವಿಪತ್ತು ನಿರ್ವಹಣಾ ಸಮಿತಿಯನ್ನು ರಚಿಸಲಾಗುವುದು ಎಂದು ದ.ಕ.ಜಿಪಂ ಸಿಇಒ ಡಾ. ಆರ್. ಸೆಲ್ವಮಣಿ ತಿಳಿಸಿದ್ದಾರೆ.

ಪಟ್ಟಿ ಮಾಡಿರುವ ಸಂಭಾವ್ಯ ಗ್ರಾಪಂ

ಮಂಗಳೂರು ತಾಲೂಕಿನ ಹರೇಕಳ, ಗುರುಪುರ, ಮಲ್ಲೂರು, ಅಡ್ಯಾರ್, ಉಳಾಯಿಬೆಟ್ಟು, ಮಳವೂರು, ಚೇಳ್ಯಾರು, ಸೂರಿಂಜೆ. *ಬಂಟ್ವಾಳ ತಾಲೂಕಿನ ಬಿ ಕಸ್ಬ, ನಾವೂರು, ಅಮ್ಟಾಡಿ, ಮಣಿನಾಲ್ಕೂರು, ಸರಪಾಡಿ, ಪೆರ್ನೆ, ಬಿ.ಮೂಡ, ಪಾಣೆಮಂಗಳೂರು, ಕಡೇಶಿವಾಲಯ, ಬರಿಮಾರು, ಸಜಿಪ ಮುನ್ನೂರು, ಪುದು, ಸಜಿಪ ಮೂಡ, ಸಜಿಪ ನಡು, ಕರಿಯಂಗಳ.

ಮುಲ್ಕಿ ತಾಲೂಕಿನ ಬಳ್ಕುಂಜೆ, ಅತಿಕಾರಿಬೆಟ್ಟು, ಐಕಳ, ಕಟೀಲು, ಕಿಲ್ಪಾಡಿ, ಹಳೆಯಂಗಡಿ, ಕೆಮ್ರಾಲ್, ಮುಲ್ಕಿ, ಐಕಳ. *ಸುಳ್ಯ ತಾಲೂಕಿನ ಸಂಪಾಜೆ, ಅರಂತೋಡು, ಅಲೆಟ್ಟಿ, ಮರ್ಕಂಜ, ಹರಿಹರ ಪುಲತ್ತಡ್ಕ.

ಕಡಬ ತಾಲೂಕಿನ ಕೊಲ್ಲಮೊಗ್ರು, ಸುಬ್ರಹ್ಮಣ್ಯ, ಕುಟ್ರುಪ್ಪಾಡಿ, ಶಿರಾಡಿ, ಕೌಕ್ರಾಡಿ.
ಪುತ್ತೂರು ತಾಲೂಕಿನ ಉಪ್ಪಿನಂಗಡಿ, ಹಿರೇಬಂಡಾಡಿ, 34 ನೆಕ್ಕಿಲಾಡಿ, ಬೆಳ್ಳಿಪ್ಪಾಡಿ, ಬಜತ್ತೂರು, ಪುತ್ತೂರು ಕಸ್ಬ.
ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು, ಕಡಿರುದ್ಯಾವರ, ಮಲವಂತಿಗೆ, ಮುಂಡಾಜೆ, ಲಾಯಿಲ, ಕೊಯ್ಯೂರು, ನಾಡ, ಇಂದಬೆಟ್ಟು, ನಾವೂರು, ಚಾರ್ಮಾಡಿ, ನೆರಿಯ, ಕಲ್ಮಂಜ, ಧರ್ಮಸ್ಥಳ, ಬೆಳಾಲು, ಬಂದಾರು, ಇಳಂತಿಲ, ನಿಡ್ಲೆ, ಶಿಶಿಲ, ನಾರಾವಿ, ವೇಣೂರು, ಅಳದಂಗಡಿ, ಶಿರ್ಲಾಲು ಹಾಗೂ ಆರಂಬೋಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News