ಬ್ರಹ್ಮಾವರ : ಬೇಕರಿ ಓವನ್ ಸ್ಫೋಟ; ವ್ಯಕ್ತಿ ಮೃತ್ಯು

Update: 2020-08-10 16:34 GMT

ಕೋಟ, ಆ.10: ಸಾಸ್ತಾನ ಐರೋಡಿಯ ಬೇಕರಿ ತಿನಿಸುಗಳ ತಯಾರಿಕಾ ಘಟಕ ಪುರ್ಟಾಡೋ ಫುಡ್ ಪ್ರೊಡಕ್ಟ್‌ನಲ್ಲಿ ಆ.10ರಂದು ಬೆಳಗಿನ ಜಾವ ಆರು ಗಂಟೆ ಸುಮಾರಿಗೆ ಸಂಭವಿಸಿದ ಓವನ್ ಸ್ಪೋಟದಿಂದ ಘಟಕದ ಮಾಲಕ ಸ್ಥಳದಲ್ಲಿಯೇ ಮೃತಪಟಿರುವ ಬಗ್ಗೆ ವರದಿಯಾಗಿದೆ.

ಮೃತರನ್ನು ರಾಬರ್ಟ್ ಪುರ್ಟಾಡೋ(58) ಎಂದು ಗುರುತಿಸಲಾಗಿದೆ. ರಾಬರ್ಟ್ ಉಳಿದ ಕೆಲಸಗಾರರೊಂದಿಗೆ ಘಟಕದಲ್ಲಿ ಕೆಲಸ ಮಾಡುತ್ತಿದ್ದು, ಈ ವೇಳೆ ರಾಬರ್ಟ್ ಓವನ್ ಆನ್ ಮಾಡಲು ಹೋಗಿದ್ದರು. ಆಗ ಓವನ್ ಆನ್ ಆಗದಿದ್ದಕ್ಕೆ ಅಲ್ಲೇ ಇದ್ದ ಗ್ಯಾಸ್ ಸಿಲಿಂಡರನ್ನು ಬದಲಾಯಿಸಿ, ಹೊಸ ಸಿಲಿಂಡರ್ ಅಳವಡಿಸಿದರು. ಬಳಿಕ ಆನ್ ಮಾಡುವಾಗ ಓವನ್ ಸ್ಪೋಟ ಗೊಂಡಿತ್ತೆನ್ನಲಾಗಿದೆ.

ಸ್ಪೋಟದಿಂದ ಸುಮಾರು 15 ಅಡಿ ದೂರಕ್ಕೆ ಎಸೆಯಲ್ಪಟ್ಟ ರಾಬರ್ಟ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು. ಅಲ್ಲೆ ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ರಮೇಶ್ ಎಂಬವರು ಗಾಯಗೊಂಡರು. ಉಳಿದವರು ಹೆದರಿ ಹೊರಗೆ ಓಡಿ ಹೋಗಿದ್ದರೆಂದು ತಿಳಿದುಬಂದಿದೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News