ಸ್ವಾತಂತ್ರ್ಯದಿನದ ಕಾರ್ಯಕ್ರಮದ ವ್ಯವಸ್ಥೆಗೆ ಟೆಂಡರ್ ಸಲ್ಲಿಕೆಯ ದಿನಾಂಕ ಆಗಸ್ಟ್ 18 !

Update: 2020-08-11 07:49 GMT

ಮಂಗಳೂರು, ಆ.10: ದ.ಕ. ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಈ ವರ್ಷ ಕಾರ್ಯಕ್ರಮಕ್ಕೆ ಪೆಂಡಾಲ್, ಕುರ್ಚಿಗಳನ್ನು ಒದಗಿಸಲು ಮಹಾನಗ ಪಾಲಿಕೆ ವತಿಯಿಂದ ಟೆಂಡರ್ ನೋಟೀಸು ಜಾಹೀರಾತು ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ಆದರೆ ಆ ನೋಟೀಸಿನಲ್ಲಿ ಆಗಸ್ಟ್ 15ರ ಕಾರ್ಯಕ್ರಮಕ್ಕೆ ಒದಗಿಸಬೇಕಾದ ವ್ಯವಸ್ಥೆಗಳಿಗೆ ಟೆಂಡರ್ ಫಾರಂ ಪಡೆಯಲು ಆಗಸ್ಟ್ 17 ಕೊನೆಯ ದಿನವಾಗಿದ್ದರೆ, ಭರ್ತಿ ಮಾಡಿದ ಆರ್ಥಿಕ ಬಿಡ್ ಸಲ್ಲಿಸಲು ಆ. 18 ಕೊನೆಯ ದಿನವೆಂದು ಪ್ರಕಟವಾಗಿತ್ತು.

ಅಧಿಕಾರಿಗಳಿಂದಾದ ಈ ಎಡವಟ್ಟಿನ ಬಗ್ಗೆ ಸಾಮಾಜಿಕ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿರುವಂತೆಯೇ ಹಳೆಯ ಟೆಂಡರ್ ರದ್ದುಪಡಿಸಿ, ಹೊಸ ಟೆಂಡರ್ ಕರೆಯಲಾಗಿದೆ.

ಸರಕಾರದ ನಿಯಮ ಪ್ರಕಾರ ಟೆಂಡರ್ ಕರೆಯದೆ ಯಾವುದೇ ಕಾಮಗಾರಿ ನಡೆಸಲು ಸಾಧ್ಯವಿಲ್ಲದ ಕಾರಣ ಜನರನ್ನು ಮೂರ್ಖರನ್ನಾಗಿಸಲು ಆಗಸ್ಟ್ 15ರ ಕಾರ್ಯಕ್ರಮದ ವ್ಯವಸ್ಥೆಗೆ ಈ ರೀತಿಯ ಟೆಂಡರ್ ಜಾಹೀರಾತು ನೀಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರು ಆಕ್ಷೇಪಿಸಿದ್ದಾರೆ.

ಪ್ರತಿ ಬಾರಿಯೂ ನಿಗದಿತ ಸಂಸ್ಥೆಯೊಂದು ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತದೆ. ಈ ಬಾರಿಯೂ ಅದೇ ಸಂಸ್ಥೆ ವಹಿಸಲಿದೆ. ಹಾಗಿದ್ದರೂ ಈ ಟೆಂಡರ್ ಎಂಬುದು ಕೇವಲ ನಾಟಕ. ಕೊರೋನ ಕಾರಣದಿಂದ ಈ ಬಾರಿ ರಾಷ್ಟ್ರ ಧ್ವಜ ಹಾರಿಸುವ ಕಾರ್ಯಕ್ರಮ ಮಾತ್ರ ಇರುವಾಗ, ಪ್ರತಿ ವರ್ಷದಂತೆ ಅದೇ ಮೊತ್ತಕ್ಕೆ ಟೆಂಡರ್ ಕರೆದಿರುವುದು ಹೇಗೆ ? ಈ ಬಾರಿ ಹಿಂದಿನ ವರ್ಷಗಳಲ್ಲಿ ಹಾಕಿದಷ್ಟು ದೊಡ್ಡ ಪೆಂಡಾಲ್, ಕುರ್ಚಿಗಳು ಬೇಕಾಗಿಲ್ಲ. ಹಾಗಿರುವಾಗ 4 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಟೆಂಡರ್ ಹೇಗೆ ಕರೆಯಲಾಗಿದೆ? ಪ್ರಮುಖ ವಿಷಯವೆಂದರೆ ಪ್ರತಿ ಬಾರಿಯೂ ಆಗಸ್ಟ್ 15ರಂದೇ ಸ್ವಾತಂತ್ರ್ಯ ದಿನಾಚರಣೆ ನಡೆಯುವುದು. ಅದರಲ್ಲೂ ಕಳೆದ ವರ್ಷ ತಯಾರಿಸಿದ ಅಂದಾಜು ಪಟ್ಟಿಯ ದಿನಾಂಕ ಬದಲಾಯಿಸಿ ಟೆಂಡರ್ ಕರೆಯಲಾಗಿದೆ. ಹಾಗಿರುವಾಗ ಈ ಪರಿ ಅಧಿಕಾರಿಗಳು ಎಡವಟ್ಟು ಮಾಡಿಕೊಳ್ಳುವುದೆಂದರೆ ಏನರ್ಥ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮನಪಾ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಟೆಂಡರ್ ದಿನಾಂಕ ಬದಲಾವಣೆ ! ಮೊತ್ತದಲ್ಲಿ ಬದಲಾವಣೆಯಿಲ್ಲ !

ಇದೀಗ ಹಳೆ ಟೆಂಡರ್ ರದ್ದುಪಡಿಸಿ ಪ್ರಕಟಿಸಲಾಗಿರುವ ಹೊಸ ಟೆಂಡರ್‌ನಲ್ಲಿ ದಿನಾಂಕವನ್ನು ಬದಲಿಸಲಾಗಿದ್ದು, ಟೆಂಡರ್ ಫಾರಂಗೆ ಅರ್ಜಿ ಸಲ್ಲಿಸಲು ಹಾಗೂ ಖಾಲಿ ಟೆಂಡರ್ ಫಾರಂ ಕರೆಯಲು ಕೊನೆಯ ದಿನಾಂಕ ಆ. 12 ಹಾಗೂ ಭರ್ತಿ ಮಾಡಿದ ಬಿಡ್ ಸಲ್ಲಿಸಲು ಆ. 13ರ ಸಂಜೆ 4 ಗಂಟೆಗೆ ಕೊನೆಯ ದಿನಾಂಕವೆಂದು ಪ್ರಕಟಿಸಲಾಗಿದೆ. ಆದರೆ ಅಂದಾಜು ಮೊತ್ತದಲ್ಲಿ ಯಾವುದೇ ಬದಲಾವಣೆಯಾಗಿಲ್ಲ !

‘‘ಸ್ವಾತಂತ್ರೋತ್ಸವ ಕಾರ್ಯಕ್ರಮದ ವ್ಯವಸ್ತೆಗಾಗಿ ಕರೆಯಲಾದ ಹಳೆಯ ಟೆಂಡರ್ ಜಾಹೀರಾತಿನಲ್ಲಿ ದಿನಾಂಕದಲ್ಲಿ ಆಗಿರುವ ಲೋಪದ ಹಿನ್ನೆಲೆಯಲ್ಲಿ ಅದನ್ನು ರದ್ದುಪಡಿಸಿ ಇದೀಗ ಹೊಸ ಟೆಂಡರ್ ಕರೆಯಲಾಗಿದೆ.’’

- ದಿನೇಶ್, ಪ್ರಭಾರ ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ.

‘‘ತಪ್ಪುಗಳು ಆಗುವುದು ಸಹಜ. ಆ ಕಾರಣದಿಂದ ಹಳೆಯ ಟೆಂಡರ್ ರದ್ದುಪಡಿಸಿ ಹೊಸ ಟೆಂಡರ್ ದಿನಾಂಕದ ಬದಲಾವಣೆಯೊಂದಿಗೆ ಕರೆಯಲಾಗಿದೆ’’

- ರವಿಶಂಕರ್ ಎಸ್., ಕಾರ್ಯಪಾಲಕ ಅಭಿಯಂತರರು, ಮನಪಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News