ಈದು ಸೀತಾರಾಮ ಮಲೆಕುಡಿಯ ಹಲ್ಲೆ ಪ್ರಕರಣ: ಸುಳ್ಳು ಪ್ರಕರಣ ದಾಖಲು ; ಸತ್ಯಶೋಧನಾ ತಂಡದಿಂದ ಆರೋಪ

Update: 2020-08-10 10:39 GMT

ಕಾರ್ಕಳ, ಆ.10: ಇತ್ತೀಚೆಗೆ ದನ ಸಾಗಾಟದ ಆರೋಪದಲ್ಲಿ ಪೋಲೀಸರಿಂದ ಮತ್ತು ಬಜರಂಗದಳದ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಈದು ಗ್ರಾಮದ ಸೀತಾರಾಮ ಮಲೆಕುಡಿಯ ಅವರ ಮನೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದ ಉಡುಪಿಯ ವಿವಿಧ ಸಂಘಟನೆಯ ಮುಖಂಡರುಗಳ ನಿಯೋಗವು ಆ.9ರಂದು ಭೇಟಿ ನೀಡಿ, ಸತ್ಯಶೋಧನೆ ನಡೆಸಿತು.

ಸೀತಾರಾಮ ಮಲೆಕುಡಿ ಮನೆ ಸಮೀಪದ ಬಾಬು ಪೂಜಾರಿ ಮನೆಯಿಂದ 5000 ಸಾವಿರ ರೂ.ಗೆ ಗಬ್ಬದ ಹಸುವನ್ನು ಖರೀದಿ ಮಾಡಿದ್ದರು. ಸೀತಾರಾಮ ಮಲೆಕುಡಿಯ ಅವರು ಆ ದನವನ್ನು ಕೊಟ್ಟಿಯಲ್ಲಿ ತಂದು ಕಟ್ಟಿದಾಗ ಸುಮಾರು 30ರಿಂದ 40 ಜನರ ಬಜರಂಗ ದಳದ ಗುಂಪು ರಾತ್ರಿ ಅಲ್ಲಿಗೆ ಬಂತು. ಬಳಿಕ ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ಸಮುಖದಲ್ಲೇ ಯೋಗೀಶ್ ಪೂಜಾರಿ ಯಾನೆ ಮುನ್ನಾ ಹಾಗೂ ರವಿ ಆಚಾರಿ ಎಂಬವರು ಸೀತಾರಾಮ ಮಲೆಕುಡಿರನ್ನು ಮನೆಯಿಂದ ಹೊರಗೆಳೆದು ತಂದು ಬಟ್ಟೆ ಚಿಚ್ಚಿ ಅವಾಚ್ಯ ಶಬ್ದಗಳಿಂದ ಬೈದು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ ಎಂದು ನಿಯೋಗ ದೂರಿದೆ.

ಈ ಹಲ್ಲೆಯಿಂದ ಸೀತಾರಾಮ ಮಲಕುಡಿಯರ ಕಣ್ಣಿಗೆ ಪೆಟ್ಟಾಗಿದೆ. ಅಷ್ಟಕ್ಕೇ ಸುಮ್ಮನಿರದ ಠಾಣಾಧಿಕಾರಿ ಮಲೆಕುಡಿಯರವರ ಮನೆ ಒಳಗೆ ನುಗ್ಗಿ ಸೀತಾರಾಮ ಮಲೆಕುಡಿಯರ ಪತ್ನಿಯನ್ನು ದೂಡಿ ಹಾಕಿ ಇಡೀ ಮನೆಯನ್ನು ಜಾಲಾಡಿದ್ದಾರೆ. ಅವರ ಮಕ್ಕಳು ಪರಿಪರಿಯಾಗಿ ಎಷ್ಟು ಬೇಡಿಕೊಂಡರೂ ಕೇಳದೇ ಸೀತಾರಾಮ ಮಲೆಕುಡಿಯರನ್ನು ಜೀಪಿನಲ್ಲಿ ತುಂಬಿಕೊಂಡು ಹೋಗಿದ್ದಾರೆ ಎಂದು ನಿಯೋಗ ಆರೋಪಿಸಿದೆ.

ದನ ಮಾರಾಟ ಮಾಡಿದ ಬಾಬು ಪೂಜಾರಿಯ ಮಗ ನವೀನ ಕೂಡ ಹಲ್ಲೆ ನಡೆಸಿದ ಗುಂಪಿನೊಂದಿಗೆ ಬಂದಿದ್ದು, ಬಜರಂಗಳ ದಳದವರೇ ದನ ಮಾರಾಟ ಮಾಡಿ ನಂತರ ಅವರೇ ಪೋಲೀಸರಿಗೆ ದೂರವಾಣಿ ಕರೆ ಮಾಡಿ ಬಂದು ಹಲ್ಲೆ ನಡೆಸಿದ್ದಾರೆ. ಸೀತಾರಾಮ ಮಲೆಕುಡಿಯ ಎಸ್ಪಿಯವರಿಗೆ ಲಿಖಿತ ದೂರು ಕೊಟ್ಟರೂ ಇನ್ನೂ ಪ್ರಕರಣ ದಾಖಲಾಗಿಲ್ಲ. ಆದರೆ ಬಜರಂಗದಳ ದವರ ಕೇವಲ ಮೌಖಿಕ ದೂರಿನನ್ವಯ ದೂರು ದಾಖಲಿಸಿ ಸೀತಾರಾಮ ಮಲೆಕುಡಿಯರನ್ನು ಪೊಲೀಸರು ಜೈಲಿಗೆ ಅಟ್ಟಿದ್ದಾರೆ ಎಂದು ದಸಂಸ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ದೂರಿದ್ದಾರೆ.

ನಿಯೋಗದಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಪರಮೇಶ್ವರ್ ಉಪ್ಪೂರು, ಭಾಸ್ಕರ್ ಮಾಸ್ಟರ್, ಮಂಜುನಾಥ್ ಬಾಳ್ಕುದ್ರು, ಜಿಲ್ಲಾ ಮುಸ್ಲಿಂ ಒಕ್ಕೂಟದ ಹುಸೈನ್ ಕೋಡಿಬೆಂಗ್ರೆ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಮಲೆಕುಡಿಯ ಸಂಘದ ಈದು ಗ್ರಾಮ ಸಮಿತಿ ಅಧ್ಯಕ್ಷ ಸದಾನಂದ ಗೌಡ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಮಿತಿ ಸದಸ್ಯ ಶೇಖರ್ ಲಾಯಿಲ ಬೆಳ್ತಂಗಡಿ, ಜಯಾನಂದ ಪಿಲಿಕಲ, ಬೆಳ್ತಂಗಡಿ ತಾಲೂಕು ಮುಖಂಡರಾದ ಸುಧಾಕರ ಆಲಂಗಾಯಿ, ನಾರಾಯಣ ಮಲೆಕುಡಿಯ ನಿಡ್ಲೆ, ರೂಪೇಶ್ ಆಲಂಗಾಯಿ, ನಿತೀಶ್ ಆಲಂಗಾಯಿ, ರಾಜೇಶ್ ನಿಡ್ಲೆ, ವಿಜಯ್ ಕಂಬುಜೆ, ವಸಂತ ಕಂಬುಜೆ ಉಪಸ್ಥಿತರಿದ್ದರು.

ಉಡುಪಿ ಚಲೋ ಮಾದರಿಯ ಹೋರಾಟ

ಹಲವು ವರ್ಷಗಳ ಹಿಂದೆ ಕೆಂಜೂರಿನಲ್ಲಿ ಗೋಸಾಗಾಟಕ್ಕೆ ಸಂಬಂಧಿಸಿ ನಡೆದ ಪ್ರವೀಣ್ ಪೂಜಾರಿ ಕೊಲೆಯ ನಂತರ ಹಮ್ಮಿಕೊಳ್ಳಲಾದ ಉಡುಪಿ ಚಲೋ ಮಾದರಿಯ ಹೋರಾಟವನ್ನು ಈ ಪ್ರಕರಣದಲ್ಲೂ ನಡೆಸಲು ನಿಯೋಗ ಚಿಂತನೆ ನಡೆಸಿದೆ. ಸೀತಾರಾಮ ಮಲೆಕುಡಿಯರ ಮೇಲೆ ಬಜರಂಗ ದಳದ ಗುಂಪು ನಡೆಸಿ ರುವ ಹಲ್ಲೆಯ ಹಿಂದೆ ಸ್ಥಳೀಯ ಶಾಸಕರ ಕುಮ್ಮಕ್ಕು ಇರುವುದು ಮೇಲು ನೋಟಕ್ಕೆ ಕಂಡು ಬಂದಿದ್ದು, ಎಲ್ಲಾ ತಪ್ಪಿತಸ್ಥ ರನ್ನು ಕೂಡಲೇ ಬಂಧಿಸಬೇಕೆಂದು ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News