ಕೊರೋನ ರಜೆ ಹೆಚ್ಚಿನ ಓದಿಗೆ ಸಹಕಾರ ನೀಡಿತ್ತು : ರಾಜ್ಯದಲ್ಲಿ ದ್ವಿತೀಯ ಸ್ಥಾನ ಹಂಚಿಕೊಂಡಿರುವ ಮಂಗಳೂರಿನ ನಿಧಿ

Update: 2020-08-10 11:35 GMT

ಮಂಗಳೂರು, ಆ.10: ‘‘ಚೆನ್ನಾಗಿ ಓದಿದ್ದೆ. ಉತ್ತಮ ಅಂಕ ಪಡೆಯುವ ನಿರೀಕ್ಷೆ ಕೂಡಾ ಇತ್ತು. ಆದರೆ 624 ಅಂಕ ದೊರೆತಿರುವುದು ಬಹಳ ಖುಷಿ ನೀಡಿದೆ. ಕೊರೋನದಿಂದಾಗಿ ಓದಲು ಹೆಚ್ಚು ದಿನಗಳು ದೊರಕಿತ್ತು’’ ಎಂದು ಎಸೆಸೆಲ್ಸಿ ಪರೀಕ್ಷೆಯಲ್ಲಿ 624 ಅಂಕಗಳೊಂದಿಗೆ ರಾಜ್ಯದಲ್ಲಿ ಎರಡನೆ ಸ್ಥಾನ ಹಂಚಿಕೊಂಡಿರುವ ಮಂಗಳೂರಿನ ನಿಧಿ ರಾವ್ ‘ವಾರ್ತಾಭಾರತಿ’ಯೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.

ಡೊಂಗರಕೇರಿ ಕೆನರಾ ಹೈಸ್ಕೂಲ್‌ನ ವಿದ್ಯಾರ್ಥಿನಿಯಾಗಿರುವ ನಿಧಿ ರಾವ್, ಬ್ಯಾಂಕ್ ಉದ್ಯೋಗಿಗಳಾಗಿರುವ ಜಯಚಂದ್ರ ಬಿ.ವಿ. ಹಾಗೂ ಸ್ವಪ್ನಾ ಜೆ. ದಂಪತಿ ಪುತ್ರಿ.

‘‘ಆಂಗ್ಲ ಭಾಷೆಯಲ್ಲಿ 100ರಲ್ಲಿ 99 ಅಂಕ ದೊರಕಿದ್ದು, ಉಳಿದೆಲ್ಲಾ ವಿಷಯಗಳಲ್ಲಿ ಶೇ. 100 ಅಂಕಗಳು ದೊರಕಿವೆ. ಮುಂದೆ ವೈದ್ಯಕೀಯ ಕ್ಷೇತ್ರದಲ್ಲಿ ಆಸಕ್ತಿ ಇರುವುದರಿಂದ ಶಾರದಾ ಕಾಲೇಜಿನಲ್ಲಿ ಪಿಯುಸಿಯಲ್ಲಿ ವಿಜ್ಞಾನ (ಪಿಸಿಎಂಬಿ)ವಿಷಯವನ್ನು ಆಯ್ದುಕೊಂಡಿದ್ದೇನೆ. ನನ್ನ ಹೆತ್ತವರು, ಶಿಕ್ಷಕರ ಪ್ರೇರಣೆಯಿಂದ ನಾನು ಎಸೆಸೆಲ್ಸಿಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಾಗಿದೆ’’ ಎಂದು ನಿಧಿ ರಾವ್ ಪ್ರತಿಕ್ರಿಯಿಸಿದ್ದಾರೆ.

‘‘ಆಕೆ ಚೆನ್ನಾಗಿ ಓದುತ್ತಿದ್ದರಿಂದ 600ರ ಮೇಲೆ ಅಂಕಗಳನ್ನು ಪಡೆಯುವ ನಿರೀಕ್ಷೆ ಇತ್ತು. ಇದೀಗ ಆಕೆ 624 ಅಂಕ ಬಂದಿರುವುದು ಖುಷಿಯಾಗಿದೆ’’ ಎಂದು ನಿಧಿ ರಾವ್ ತಾಯಿ ಸ್ವಪ್ನಾ ಜೆ. ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News