ಎಸೆಸೆಲ್ಸಿ ಫಲಿತಾಂಶ : ರಾಜ್ಯದ ಟಾಪರ್ಸ್ ಪೈಕಿ ನಾಲ್ವರು ಆಳ್ವಾಸ್‍ ವಿದ್ಯಾರ್ಥಿಗಳು

Update: 2020-08-10 17:50 GMT

ಮೂಡುಬಿದಿರೆ : ಎಸೆಸೆಲ್ಸಿ ಫಲಿತಾಂಶದಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢ ಶಾಲೆಯ 4 ಮಂದಿ ವಿದ್ಯಾರ್ಥಿಗಳು ಟಾಪ್ ಹತ್ತರಲ್ಲಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಪ್ರಕೃತಿ ಪ್ರಿಯ ಮತ್ತು ಸಮ್ಮೇದ್ ಮಹಾವೀರ ಅವರು ತಲಾ 622 ಅಂಕದೊಂದಿಗೆ ದ್ವಿತೀಯ ಸ್ಥಾನ, ಕಾವ್ಯ ಪಿ ಹಳ್ಳಿ ಮತ್ತು ಶ್ರಾವ್ಯ ತಲಾ 621 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಸಾಕ್ಷಿ ರಾಜ್ ಕುಂಬಾರ್  ಹಾಗೂ ರಕ್ಷಿತಾ ದಾನಲಿಂಗ್ ತಲಾ 620 ಅಂಕಗಳಿಸಿದ್ದಾರೆ.

ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢ ಶಾಲೆ ಸತತ 12 ನೇ ಬಾರಿಗೆ ಶೇ 100 ಫಲಿತಾಂಶ ದಾಖಲಿಸಿದೆ. ಎಲ್ಲ 160 ವಿದ್ಯಾರ್ಥಿಗಳೂ ಪ್ರಥಮ ದರ್ಜೆಯಲ್ಲಿ ಉತೀರ್ಣರಾಗಿದ್ದಾರೆ ಆಂಗ್ಲ ಭಾಷೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳಿಸಿದ್ದಾರೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ  ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಎಸೆಸೆಲ್ಸಿ ಫಲಿತಾಂಶದ ಬಗ್ಗೆ  ಮಾಹಿತಿ ನೀಡಿದರು. ಆಂಗ್ಲ ಮಾಧ್ಯಮ ವಿಭಾಗದಲ್ಲಿ 537 ವಿದ್ಯಾರ್ಥಿಗಳ ಪೈಕಿ 531  ಮಂದಿ ವಿದ್ಯಾರ್ಥಿಗಳು ಉತೀರ್ಣರಾಗಿದ್ದು ಶೇ 99 ಫಲಿತಾಂಶ ದಾಖಲಾಗಿದೆ.  ಆನಂದ ಪಾಟೀಲ್ ಮತ್ತು ರೇಶ್ಮಾ ಎಂ. ಪೂಜಾರಿ ತಲಾ 620 ಅಂಕಗಳೊಂದಿಗೆ ಉತ್ತಮ ಸಾಧನೆ ಮಾಡಿದ್ದಾರೆ. ಉಚಿತ ದತ್ತು ಶಿಕ್ಷಣ ಯೋಜನೆಯಡಿ ಶಿಕ್ಷಣ ಪಡೆದ ಶ್ರೀನಿವಾಸ ಸುಡುಗಾಡು ಸಿದ್ಧ (615 ಅಂಕ) ಕಾವ್ಯ ಕುಡುಬಿ 612 ಅಂಕಗಳೊಂದಿಗೆ ಗಮನಾರ್ಹ ಸಾಧನೆ ಮಾಡಿದ್ದಾರೆ. ಎರಡೂ ವಿಭಾಗಗಳಲ್ಲಿ 91 ವಿದ್ಯಾರ್ಥಿಗಳು 600ಕ್ಕೂ ಮೇಲ್ಪಟ್ಟು ಅಂಕ ಗಳಿಸಿದ್ದಾರೆ. ವಿಷಯವಾರು ಪೇಪರ್ಸ್‍ಗಳ ಪೈಕಿ 365 ಪೇಪರ್‍ಗಳಲ್ಲಿ  ನೂರಕ್ಕೆ ನೂರು ಅಂಕ ಗಳಿಕೆಯ ಸಾಧನೆ ರಾಜ್ಯದಲ್ಲೇ ಶಿಕ್ಷಣ ಸಂಸ್ಥೆಯೊಂದರ ಗಮನಾರ್ಹ ಸಾಧನೆಯಾಗಿದೆ ಎಂದು ಡಾ. ಮೋಹನ ಆಳ್ವ ಸಂತಸ ವ್ಯಕ್ತ ಪಡಿಸಿದ್ದಾರೆ. 

ಆಳ್ವಾಸ್ ಪ್ರೌಢಶಾಲೆಯ ಆಡಳಿತಾಧಿಕಾರಿ ಪ್ರಕಾಶ್ ಶೆಟ್ಟಿ, ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ  ಪ್ರಶಾಂತ್ ಬಿ, ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ವಿಜಯ ಟಿ ಮೂರ್ತಿ, ಪಿ.ಆರ್. ಒ. ಡಾ. ಪದ್ಮನಾಭ ಶೆಣೈ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News