ಡಾ. ಕಫೀಲ್ ಖಾನ್ ಬಿಡುಗಡೆ ಕುರಿತು ನಿರ್ಧರಿಸಲು ಹೈಕೋರ್ಟಿಗೆ 15 ದಿನಗಳ ಗಡುವು ನೀಡಿದ ಸುಪ್ರೀಂ ಕೋರ್ಟ್

Update: 2020-08-11 10:53 GMT

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧದ ಪ್ರತಿಭಟನೆಗಳ ವೇಳೆ ಜನವರಿಯಲ್ಲಿ ಬಂಧಿತರಾದ ಡಾ. ಕಫೀಲ್ ಖಾನ್ ರನ್ನು ಬಿಡುಗಡೆಗೊಳಿಸುವ ಕುರಿತಂತೆ ನಿರ್ಧರಿಸಲು ಅಲಹಾಬಾದ್ ಹೈಕೋರ್ಟಿಗೆ ಇಂದು ಸುಪ್ರೀಂ ಕೋರ್ಟ್ 15 ದಿನಗಳ ಗಡುವು ವಿಧಿಸಿದೆ.

“ಪ್ರಕರಣದ ವಿಚಾರಣೆ ನಡೆಸಿ ಡಾ. ಕಫೀಲ್ ಖಾನ್ ಅವರನ್ನು ಬಿಡುಗಡೆಗೊಳಿಸಬೇಕೇ ಅಥವಾ ಬೇಡವೇ ಎಂಬ ಕುರಿತು ಮುಂದಿನ 15 ದಿನಗಳೊಳಗೆ ನಿರ್ಧರಿಸಿ” ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿದೆ.

ಗೋರಖ್ ಪುರ ಬಿ. ಆರ್. ಡಿ. ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಹಲವು ಮಕ್ಕಳು ಮೃತಪಟ್ಟ ಘಟನೆಯ ನಂತರ ತಮ್ಮದಲ್ಲದ ತಪ್ಪಿಗೆ ಸೇವೆಯಿಂದ ವಜಾಗೊಂಡು ಜೈಲು ಶಿಕ್ಷೆಗೂ ಗುರಿಯಾಗಿದ್ದ ಡಾ. ಕಫೀಲ್ ಖಾನ್ ಅವರನ್ನು ಜನವರಿಯಲ್ಲಿ ಆಲಿಘರ್ ಮುಸ್ಲಿಂ ವಿವಿ ಕ್ಯಾಂಪಸ್‍ ನಲ್ಲಿ ಸಿಎಎ ವಿರೋಧಿ ಪ್ರತಿಭಟನೆ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಬಂಧಿಸಲಾಗಿತ್ತು.

ಡಾ. ಖಾನ್ ಅವರ ತಾಯಿ ನುಝ್ಹತ್ ಪರ್ವೀನ್ ತಮ್ಮ ಪುತ್ರನ ಬಿಡುಗಡೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಈ ಹಿಂದೆ ಆಗಸ್ಟ್ 6ರಂದು ನಡೆಸಿದ್ದ ಜಸ್ಟಿಸ್ ಮನೋಜ್ ಮಿಶ್ರಾ ಹಾಗೂ ದೀಪಕ್ ವರ್ಮ ಅವರ ಪೀಠ ಕೇಂದ್ರ ಮತ್ತು ಉತ್ತರ ಪ್ರದೇಶ ಸರಕಾರಗಳಿಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿತ್ತು.

ಖಾನ್ ಅವರಿಗೆ ವಿಚಾರಣಾ ನ್ಯಾಯಾಲಯ ಈ ಹಿಂದೆ  ಜಾಮೀನು ನೀಡಿದ್ದರೂ ಅವರನ್ನು ನಾಲ್ಕು ದಿನ ಬಿಡುಗಡೆಗೊಳಿಸಲಾಗಿರಲಿಲ್ಲ ಹಾಗೂ ನಂತರ ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆ ಹೇರಲಾಗಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News