ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಆರೋಗ್ಯ ಸ್ಥಿತಿ ಗಂಭೀರ

Update: 2020-08-11 14:41 GMT

ಹೊಸದಿಲ್ಲಿ, ಆ. 11: ಕೊರೋನ ಸೋಂಕಿತರಾಗಿರುವ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಸೋಮವಾರ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಿ ರಕ್ತ ಹೆಪ್ಪುಗಟ್ಟಿರುವುದನ್ನು ತೆಗೆದ ಬಳಿಕ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಎಂದು ದಿಲ್ಲಿಯ ಸೇನಾ ಮತ್ತು ರೆಫರಲ್ ಆಸ್ಪತ್ರೆಯ ಬುಲೆಟಿನ್ ಹೇಳಿದೆ.

‘‘ಗಂಭೀರ ಆರೋಗ್ಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ದಿಲ್ಲಿಯ ಸೇನಾ ಆಸ್ಪತ್ರೆಗೆ 2020 ಆಗಸ್ಟ್ 10ರಂದು ದಾಖಲಿಸಲಾಗಿತ್ತು. ತಪಾಸಣೆ ವೇಳೆ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಪತ್ತೆಯಾಯಿತು. ಅವರ ಜೀವ ರಕ್ಷಿಸಲು ಕೂಡಲೇ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆ ಬಳಿಕ ವೆಂಟಿಲೇಟರ್‌ನಲ್ಲಿ ಇರುವ ಮುಖರ್ಜಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರು ಕೊರೋನ ಸೋಂಕಿಗೆ ಕೂಡ ಒಳಗಾಗಿದ್ದಾರೆ’’ ಆಸ್ಪತ್ರೆಯ ಬುಲೆಟಿನ್ ಹೇಳಿದೆ.

ಬೇರೆ ಕಾರಣಗಳಿಗೆ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಕೊರೋನ ಪರೀಕ್ಷೆ ಮಾಡಲಾಗಿತ್ತು. ಈ ಪರೀಕ್ಷೆಯಲ್ಲಿ ತನಗೆ ಕೊರೋನ ಇರುವುದು ದೃಢಪಟ್ಟಿದೆ ಎಂದು ಮುಖರ್ಜಿ ಸೋಮವಾರ ಹೇಳಿದ್ದರು. ಕಳೆದ ಒಂದು ವಾರಗಳಿಂದ ನನ್ನ ಸಂಪರ್ಕದಲ್ಲಿ ಇರುವವರು ಐಸೋಲೇಶನ್‌ಗೆ ಒಳಗಾಗುವಂತೆ ಹಾಗೂ ಕೊರೋನ ಪರೀಕ್ಷೆ ಮಾಡಿಸಿಕೊಳ್ಳುವಂತೆ ಪ್ರಣವ್ ಮುಖರ್ಜಿ ಟ್ವೀಟ್‌ನಲ್ಲಿ ಆಗ್ರಹಿಸಿದ್ದರು. ಪ್ರಣವ್ ಮುಖರ್ಜಿ ಅವರು ಶೀಘ್ರ ಗುಣಮುಖರಾಗುವಂತೆ ರಾಜಕೀಯ ನಾಯಕರು ಪಕ್ಷಬೇಧ ಮರೆತು ಹಾರೈಸಿದ್ದಾರೆ.

‘‘ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಶೀಘ್ರ ಗುಣಮುಖವಾಗಲಿ ಎಂದು ಹಾರೈಸುತ್ತೇನೆ. ನಿಮ್ಮ ಆರೋಗ್ಯ, ಸುದೀರ್ಘ ಜೀವನಕ್ಕಾಗಿ ಪೂರ್ಣ ದೇಶವೇ ಪ್ರಾರ್ಥನೆ ಸಲ್ಲಿಸುತ್ತದೆ’’ ಎಂದು ಬಿಜೆಪಿ ವಕ್ತಾರ ಗೋಪಾಲಕೃಷ್ಣ ಅಗರ್ವಾಲ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News