ರಾಜಕೀಯ ಒತ್ತಡದಿಂದ ಮುಂಬೈಯಲ್ಲಿ ಎಫ್‌ಐಆರ್ ದಾಖಲಿಸಿಲ್ಲ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಬಿಹಾರ ಸರಕಾರ

Update: 2020-08-11 14:59 GMT

ಹೊಸದಿಲ್ಲಿ, ಆ. 10: ತನ್ನ ವಿರುದ್ಧ ನಟ ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ಕೆ.ಕೆ. ಸಿಂಗ್ ದಾಖಲಿಸಿದ್ದ ಎಫ್‌ಐಆರ್‌ನ್ನು ಪಾಟ್ನಾದಿಂದ ಮುಂಬೈಗೆ ವರ್ಗಾವಣೆ ಮಾಡುವಂತೆ ಕೋರಿ ರಿಯಾ ಚಕ್ರವರ್ತಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಿಚಾರಣೆ ನಡೆಸಿತು.

ರಾಜಕೀಯ ಒತ್ತಡದ ಕಾರಣಕ್ಕೆ ಈ ಪ್ರಕರಣಕ್ಕೆ ಸಂಬಂಧಿಸಿ ಮುಂಬೈಯಲ್ಲಿ ಎಫ್‌ಐಆರ್ ದಾಖಲಿಸಿಲ್ಲ ಎಂದು ಬಿಹಾರ ಸರಕಾರದ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಮಹಿಂದರ್ ಸಿಂಗ್ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದರು. ಈ ಪ್ರಕರಣದ ತನಿಖೆ ನಡೆಸಲು ಬಿಹಾರ ಪೊಲೀಸರು ಮುಂಬೈಯಲ್ಲಿ ಇದ್ದಾಗ ಮುಂಬೈ ಪೊಲೀಸರು ಸಹಕಾರ ನೀಡಿಲ್ಲ ಎಂದು ಸಿಂಗ್ ಹೇಳಿದರು.

ಇದೇ ರೀತಿ ಸುಶಾಂತ್ ಕುಟುಂಬವನ್ನು ಪ್ರತಿನಿಧಿಸಿದ ಹಿರಿಯ ವಕೀಲ ವಿಕಾಸ್ ಸಿಂಗ್ ಕೂಡ, ಈ ಪ್ರಕರಣದಲ್ಲಿ ಮುಂಬೈ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

‘‘ಮುಂಬೈ ಪೊಲೀಸರು ಈಗಲೂ ಏನೂ ಮಾಡುತ್ತಿಲ್ಲ. ಈಗ ಅವರು ರಾಜಕೀಯ ಒತ್ತಡ ಹಾಗೂ ಬಿಹಾರ್ ಮುಖ್ಯಮಂತ್ರಿಯ ಒತ್ತಡ ಎಂದು ಆರೋಪಿಸುತ್ತಿದೆ’’ ಎಂದು ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದರು. ಇನ್ನೊಂದೆಡೆ ರಿಯಾ ಚಕ್ರವರ್ತಿ ಪರ ನ್ಯಾಯವಾದಿ ಶ್ಯಾಮ್ ದಿವಾನ್, ಈ ಪ್ರಕರಣದ ತನಿಖೆ ನಡೆಸಲು ಪಾಟ್ನಾ ಪೊಲೀಸರಿಗೆ ಅಧಿಕಾರ ವ್ಯಾಪ್ತಿ ಇಲ್ಲ. ಈ ಪ್ರಕರಣವನ್ನು ಮುಂಬೈ ಪೊಲೀಸರಿಗೆ ವರ್ಗಾಯಿಸುವುದು ಸರಿಯಾದ ದಾರಿ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News