ರಾಜ್ಯಗಳು ಕೊರೋನ ಸೋಂಕು ಪರೀಕ್ಷೆ ಹೆಚ್ಚಿಸಬೇಕು: ಪ್ರಧಾನಿ ನರೇಂದ್ರ ಮೋದಿ

Update: 2020-08-11 15:44 GMT

ಹೊಸದಿಲ್ಲಿ, ಆ.11: ದೇಶದಲ್ಲಿ ಕೊರೋನ ಸೋಂಕು ಹರಡುವುದನ್ನು ನಿಯಂತ್ರಿಸುವ ಪ್ರಕ್ರಿಯೆಯಲ್ಲಿ ಪ್ರತಿಯೊಂದು ರಾಜ್ಯದ ಪಾತ್ರವೂ ಮಹತ್ವದ್ದಾಗಿದ್ದು, ಸಕ್ರಿಯ ಪ್ರಕರಣ ಹೆಚ್ಚಿರುವ ರಾಜ್ಯಗಳು ಸೋಂಕು ಪರೀಕ್ಷೆಯ ಪ್ರಮಾಣ ಹೆಚ್ಚಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್, ಆಂಧ್ರಪ್ರದೇಶ, ಬಿಹಾರ, ಗುಜರಾತ್, ತಮಿಳುನಾಡು, ತೆಲಂಗಾಣ, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳೊಂದಿಗೆ ಮಂಗಳವಾರ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಿದ ಪ್ರಧಾನಿ ಮೋದಿ, ದೇಶದಲ್ಲಿ ಕೊರೋನ ಸೋಂಕಿನ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಿದರು.

ದೇಶದಲ್ಲಿ ಅತ್ಯಧಿಕ ಸೋಂಕು ಪ್ರಕರಣ ವರದಿಯಾಗಿರುವ ಅಗ್ರ ಮೂರು ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಜೊತೆಗೆ ಕಳೆದ 24 ಗಂಟೆಯಲ್ಲಿ ಅತ್ಯಧಿಕ ಸೋಂಕು ಮತ್ತು ಸಾವಿನ ಪ್ರಕರಣ ದಾಖಲಾಗಿರುವ ಕರ್ನಾಟಕ ಮತ್ತು ಉತ್ತರಪ್ರದೇಶ ರಾಜ್ಯಗಳ ಸಹಿತ ಸಭೆಯಲ್ಲಿ ಪಾಲ್ಗೊಂಡಿದ್ದ 10 ರಾಜ್ಯಗಳಲ್ಲಿ ದೇಶದ ಸಕ್ರಿಯ ಪ್ರಕರಣದ 80% ಪ್ರಮಾಣ ದಾಖಲಾಗಿದೆ.

ಈ 10 ರಾಜ್ಯಗಳು ಕೊರೋನ ಸೋಂಕಿನ ವಿರುದ್ಧದ ಯದ್ಧದಲ್ಲಿ ಮೇಲುಗೈ ಸಾಧಿಸಿದರೆ ಅದು ದೇಶಕ್ಕೇ ಸಲ್ಲುವ ಗೆಲುವಾಗಿರಲಿದೆ ಎಂದು ಮೋದಿ ಹೇಳಿದರು. ಪೊಸಿಟಿವ್ ಪ್ರಕರಣ ಹೆಚ್ಚಿರುವ ಬಿಹಾರ, ಗುಜರಾತ್, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣದಲ್ಲಿ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸುವುದಕ್ಕೆ ಆದ್ಯತೆ ನೀಡಬೇಕು. ಆಯಾ ರಾಜ್ಯಗಳು ತಮ್ಮಲ್ಲಿನ ವಾಸ್ತವಿಕ ಸ್ಥಿತಿಗತಿಯ ಮೇಲೆ ನಿರಂತರ ಗಮನ ಹರಿಸುವುದರಿಂದ ಯಶಸ್ಸು ಪಡೆಯಲು ಸಾಧ್ಯ.

ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ಅಗಾಧ ಅನುಭವದಿಂದ ಈ ಯಶಸ್ಸು ಪಡೆಯುತ್ತಾರೆ ಎಂಬ ವಿಶ್ವಾಸವಿದೆ . ಕೊರೋನ ವಿರುದ್ಧದ ಹೋರಾಟದಲ್ಲಿ ಕಂಟೈನ್‌ಮೆಂಟ್ (ನಿಯಂತ್ರಣ), ಕಾಂಟ್ಯಾಕ್ಟ್ ಟ್ರೇಸಿಂಗ್ (ಸಂಪರ್ಕ ಪತ್ತೆ) ಮತ್ತು ಸರ್ವೇಲೆನ್ಸ್ (ನಿಗಾ) ಪರಿಣಾಮಕಾರಿ ಆಯುಧಗಳಾಗಿವೆ. ಕೊರೋನ ಸೋಂಕಿತರನ್ನು ಸಕಾಲದಲ್ಲಿ ಪತ್ತೆಹಚ್ಚಿ ಚಿಕಿತ್ಸೆ ನೀಡುವುದೂ ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಸೇತು ಮೊಬೈಲ್ ಆ್ಯಪ್ ಉಪಯುಕ್ತವಾಗಿದೆ ಎಂದು ಮೋದಿ ಹೇಳಿದರು.

ಸಕ್ರಿಯ ಪ್ರಕರಣದ ಸರಾಸರಿ ಕಡಿಮೆಯಾಗಿ ಚೇತರಿಕೆ ಪ್ರಮಾಣದ ಸರಾಸರಿ ಹೆಚ್ಚಿರುವುದು ನಮ್ಮ ಪ್ರಯತ್ನ ಫಲ ನೀಡಿರುವ ಸೂಚನೆಯಾಗಿದೆ. ಜೊತೆಗೆ, ಜನರ ಮನದಲ್ಲಿದ್ದ ಭೀತಿ ದೂರವಾಗಿ ವಿಶ್ವಾಸ ಮತ್ತು ಆತ್ಮಸ್ಥೈರ್ಯ ಹೆಚ್ಚಿದೆ ಎಂದು ಪ್ರಧಾನಿ ಹೇಳಿದರು. ಈ ಸಂದರ್ಭ ಮಾತನಾಡಿದ ಮುಖ್ಯಮಂತ್ರಿಗಳು, ಉದಾರ ಆರ್ಥಿಕ ಪ್ಯಾಕೇಜ್ ಮತ್ತು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಹಣ ಖರ್ಚು ಮಾಡಲು ಇರುವ ಮಿತಿಯನ್ನು ಸಡಿಲಿಸಲು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News