ಪಾಕಿಸ್ತಾನದ ನಂಬರ್‌ನಿಂದ ಬೆದರಿಕೆ ಕರೆ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ದೂರು

Update: 2020-08-11 17:21 GMT

ಲಕ್ನೊ, ಆ.11: ಬಾಂಬ್ ಎಸೆದು ಹತ್ಯೆ ಮಾಡುವುದಾಗಿ ತನಗೆ ಪಾಕಿಸ್ತಾನದ ನಂಬರ್‌ನಿಂದ ಬೆದರಿಕೆ ಕರೆ ಬಂದಿರುವುದಾಗಿ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ತನ್ನನ್ನು ಮನೆಯ ಸಹಿತ ಬಾಂಬಿನಿಂದ ಉಡಾಯಿಸಿ ಬಿಡುವುದಾಗಿ ಪಾಕಿಸ್ತಾನದಲ್ಲಿ ನೆಲೆ ಹೊಂದಿರುವ ಉಗ್ರರ ಸಂಘಟನೆ ಬೆದರಿಕೆ ಕರೆ ಮಾಡಿದೆ. ಅಲ್ಲದೆ ಕಾಶ್ಮೀರ ಅತೀ ಶೀಘ್ರದಲ್ಲಿ ಪಾಕ್ ವಶಕ್ಕೆ ಬರಲಿದೆ ಎಂದೂ ಹೇಳಿಕೊಂಡಿದ್ದು ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಭೂಮಿಪೂಜೆ ಕಾರ್ಯಕ್ರಮದ ಬಗ್ಗೆ ಅಸಭ್ಯವಾಗಿ ನಿಂದಿಸಿದ್ದಾರೆ ಎಂದು ಸದರ್‌ಕೋಠ್‌ವಾಲಿ ಠಾಣೆಗೆ ನೀಡಿದ ದೂರಿನಲ್ಲಿ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.

ತನ್ನ ಚಲನವಲನದ ಮೇಲೆ ನಿರಂತರ ನಿಗಾ ವಹಿಸಲಾಗಿದೆ ಎಂದು ಫೋನ್ ಮಾಡಿದಾತ ಹೇಳಿದ್ದಾನೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ರನ್ನೂ ನಿಂದಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು. ವೈ ದರ್ಜೆಯ ಭದ್ರತೆಯನ್ನು ಹೊಂದಿರುವ ಸಾಕ್ಷಿ ಮಹಾರಾಜ್ ನಿವಾಸಕ್ಕೆ ಪೊಲೀಸ್ ಭದ್ರತೆ ಒದಗಿಸುವ ಜೊತೆಗೆ, ಅವರಿಗೆ ಒದಗಿಸಿರುವ ಭದ್ರತೆಯನ್ನು ಹೆಚ್ಚಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಪೊಲೀಸ್ ಅಧೀಕ್ಷಕರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News