ಇಡುಕ್ಕಿ ಭೂಕುಸಿತ ದುರಂತ: ಮೃತರ ಸಂಖ್ಯೆ 52ಕ್ಕೇರಿಕೆ

Update: 2020-08-11 17:23 GMT

ತಿರುವನಂತಪುರಂ, ಆ.11: ಕೇರಳದ ಇಡುಕ್ಕಿ ಜಿಲ್ಲೆಯ ರಾಜಮಲದಲ್ಲಿ ಸಂಭವಿಸಿದ ಭೂಕುಸಿತದ ಹಿನ್ನೆಲೆಯಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯದಲ್ಲಿ ತೊಡಗಿದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಮತ್ತೆ ಮೂರು ಮೃತದೇಹ ಪತ್ತೆ ಮಾಡುವುದರೊಂದಿಗೆ ಈ ದುರಂತದಲ್ಲಿ ಮೃತರ ಸಂಖ್ಯೆ 52ಕ್ಕೇರಿದೆ ಎಂದು ಮೂಲಗಳು ಹೇಳಿವೆ.

ಮುನ್ನಾರ್ ಬಳಿಯ ರಾಜಮಲದಲ್ಲಿ ಆಗಸ್ಟ್ 6ರಂದು ಸಂಭವಿಸಿದ ಭೂಕುಸಿತದಲ್ಲಿ ಚಹಾತೋಟದ ಕಾರ್ಮಿಕರು ವಾಸಿಸುತ್ತಿದ್ದ ಮನೆಗಳು ಮಣ್ಣಿನಡಿ ಸೇರಿಹೋಗಿತ್ತು. ಇಲ್ಲಿ ಸುಮಾರು 71 ಕಾರ್ಮಿಕರಿದ್ದರು ಎಂದು ಇಡುಕ್ಕಿ ಜಿಲ್ಲಾಡಳಿತ ತಿಳಿಸಿದ್ದು ಉಳಿದ 19 ಕಾರ್ಮಿಕರ ಶೋಧಕಾರ್ಯ ಮುಂದುವರಿದಿದೆ. ಮಂಗಳವಾರ ಬೆಳಿಗ್ಗೆ ಪೆಟ್ಟಿಮುಡಿ ನದಿಯಲ್ಲಿ, ದುರಂತ ನಡೆದ ಸ್ಥಳಕ್ಕಿಂತ ಸುಮಾರು 4 ಕಿ.ಮೀ ದೂರದಲ್ಲಿ ಮೂವರ ಮೃತದೇಹ ಪತ್ತೆಯಾಗಿದೆ.

ಕೆಲವು ಮೃತದೇಹಗಳು ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಅಗ್ನಿಶಾಮಕ ದಳ, ಪೊಲೀಸ್, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಗ್ರಾಮಪಂಚಾಯತ್ ಇಲಾಖೆ ಸಿಬಂದಿಗಳು ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News