ಜಮ್ಮು-ಕಾಶ್ಮೀರ: ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರ ಹತ,ಯೋಧ ಹುತಾತ್ಮ

Update: 2020-08-12 04:59 GMT

 ಶ್ರೀನಗರ, ಆ.12: ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಇಂದು ಬೆಳಗ್ಗಿನ ಜಾವ ಭದ್ರತಾ ಪಡೆಗಳು ನಡೆಸಿರುವ ಕಾರ್ಯಾಚರಣೆಯ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಯೋಧನೊಬ್ಬ ಹುತಾತ್ಮರಾದರೆ, ಉಗ್ರನೊಬ್ಬ ಹತನಾಗಿರುವ ಘಟನೆ ವರದಿಯಾಗಿದೆ.

ಎನ್‌ಕೌಂಟರ್‌ನಲ್ಲಿ ಹತನಾಗಿರುವ ಉಗ್ರನ ಗುರುತನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಾಗಿದೆ.

ಪುಲ್ವಾಮದ ಕಾಮ್‌ರಾಝಿಪೊರ ಹಳ್ಳಿಯ ತೋಟವೊಂದರಲ್ಲಿ ಭದ್ರತಾ ಪಡೆ ನಡೆಸಿರುವ ಕಾರ್ಯಾಚರಣೆಯಲ್ಲಿ ಓರ್ವ ಅಪರಿಚಿತ ಉಗ್ರ ಹತನಾಗಿದ್ದಾನೆ., ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.

ಉಗ್ರರು ಅಡಗಿಕುಳಿತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಬುಧವಾರ ಬೆಳಗ್ಗಿನ ಜಾವ ಪುಲ್ವಾಮ ಜಿಲ್ಲೆಯ ಹಳ್ಳಿಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಉಗ್ರರು ಗುಂಡಿನ ದಾಳಿ ನಡೆಸಿದಾಗ ಇಬ್ಬರು ಯೋಧರು ಗಾಯಗೊಂಡರು. ಗಾಯಗೊಂಡಿದ್ದ ಭದ್ರತಾ ಸಿಬ್ಬಂದಿಯನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಓರ್ವ ಯೋಧ ಚಿಕಿತ್ಸೆಯ ವೇಳೆ ಮೃತಪಟ್ಟಿದ್ದಾರೆ. ಉಗ್ರ ಸತ್ತು ಬಿದ್ದ ಎನ್‌ಕೌಂಟರ್ ಸ್ಥಳದಿಂದ ಎಕೆ ರೈಫಲ್ ಹಾಗೂ ಕೆಲವು ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News