ಇಡುಕ್ಕಿ ಭೂಕುಸಿತದಲ್ಲಿ ನಾಪತ್ತೆಯಾಗಿರುವ ಮಾಲಕನ ಬರುವಿಕೆಗಾಗಿ ಕಾಯುತ್ತಿರುವ ಶ್ವಾನ...

Update: 2020-08-12 07:05 GMT

ಇಡುಕ್ಕಿ : ಇಲ್ಲಿನ ಪೆಟ್ಟಿಮುಡಿಯಲ್ಲಿ ಶುಕ್ರವಾರ ಸಂಭವಿಸಿದ ಭೂಕುಸಿತ 52 ಮಂದಿಯ ಜೀವ ಬಲಿ ಪಡೆದಿದ್ದು, ಮಡುಗಟ್ಟಿದ ಶೋಕದ ನಡುವೆಯೇ ತಮ್ಮ ಪ್ರೀತಿಪಾತ್ರರಿಗಾಗಿ ಹುಡುಕಾಟ ಮುಂದುವರಿದಿದೆ.

ಕಳೆದ ನಾಲ್ಕು ದಿನಗಳಿಂದ ಕುಸಿದ ಮಣ್ಣಿನ ರಾಶಿ ಮತ್ತು ಅವಶೇಷಗಳ ಬಳಿ ಶ್ವಾನವೊಂದು ತನ್ನ ಮಾಲಕನಿಗಾಗಿ ಕಾಯುತ್ತಾ ಕುಳಿತಿರುವ ದೃಶ್ಯ ಪತ್ರಕರ್ತರ ಹಾಗೂ ಪರಿಹಾರ ಕಾರ್ಯಕರ್ತರ ಗಮನ ಸೆಳೆದಿದೆ.

ಕಂಗೆಟ್ಟು ಅತ್ತಿಂದಿತ್ತ ಓಡಾಡುತ್ತಿರುವ ನಾಯಿ, ಮೂಸಿ ನೋಡಿಕೊಂಡು ಮಣ್ಣನ್ನು ಅಗೆಯುತ್ತಾ, ತನ್ನ ಮಾಲಕನ ಮನೆಯ ಅವಶೇಷಗಳನ್ನು ಹುಡುಕುತ್ತಿರುವ ದೃಶ್ಯ ಮನಮುಟ್ಟುವಂತಿದೆ. ಒಂದು ಕಲ್ಲಿನಿಂದ ಇನ್ನೊಂದಕ್ಕೆ ಹಾರುತ್ತಾ, ಚಿಂದಿ ಹೆಕ್ಕಿಕೊಂಡು ಕಾಲಿನಿಂದ ಮಣ್ಣು ಕೆದಕುತ್ತಿದೆ.
ಈ ಶ್ವಾನದ ಮಾಲಕ ಅಣ್ಣಾದುರೈ (48) ಮತ್ತು ಮಾಲಕಿ ಟಂಕಮ್ಮ ಅವರ ಕಳೇಬರಹ ಪೆಟ್ಟಿಮುಡಿಯ ನೆಮ್ಮಕ್ಕಡು ಎಸ್ಟೇಟ್ ಬಳಿ ಪತ್ತೆಯಾಗಿದೆ.

ಇದು ಅಣ್ಣಾದುರೈ ಅವರ ನಾಯಿ. ಮೊದಲ ಸಾಲಿನ ಮನೆ ಅವರಿಗೆ ಸೇರಿದ್ದು. ಅಲ್ಲಿನ ನಿವಾಸಿಗಳೆಲ್ಲ ಮಣ್ಣಿನ ಅಡಿ ಸಿಲುಕಿದ್ದಾರೆ. ಭೂಕುಸಿತಕ್ಕೆ ಕ್ಷಣಕಾಲ ಮುನ್ನ ಸದ್ದು ಕೇಳಿಸಿಕೊಂಡ ನಾಯಿ ದೂರ ಹೋಗಿ ನಿಂತಿತ್ತು. ಬೆಳಗ್ಗೆ ಅದು ಮನೆ ಮತ್ತು ಮಾಲಕನನ್ನು ಹುಡುಕುತ್ತಾ ಬಂತು. ಆದರೆ ಅದಕ್ಕೆ ಕಂಡದ್ದು ಮಣ್ಣಿನ ರಾಶಿ ಮಾತ್ರ. ನಾಲ್ಕು ದಿನಗಳಿಂದ ಅದು ಮಾಲಕನನ್ನು ಹುಡುಕುತ್ತಲೇ ಇದೆ. ಅದರ ಚಡಪಡಿಕೆ, ರೋಧನವನ್ನು ಕಾಣಬಹುದು ಎಂದು ಸ್ಥಳೀಯರಾದ ವೈರಮುತ್ತು ಹೇಳುತ್ತಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News