ವರದಿಗಾರಿಕೆಗೆ ತೆರಳಿದ್ದ ‘ಕಾರವಾನ್’ ಪತ್ರಕರ್ತರ ಮೇಲೆ ಹಲ್ಲೆ ನಡೆಸಿ, ಲೈಂಗಿಕ ಕಿರುಕುಳ ನೀಡಿದ ದುಷ್ಕರ್ಮಿಗಳ ತಂಡ

Update: 2020-08-12 08:50 GMT

ಹೊಸದಿಲ್ಲಿ: ವರದಿಗಾರಿಕೆಗಾಗಿ ಈಶಾನ್ಯ ದಿಲ್ಲಿಗೆ ತೆರಳಿದ್ದ ವೇಳೆ 'ಕಾರವಾನ್' ಮ್ಯಾಗಝಿನ್ ನ ಮೂವರು ಪತ್ರಕರ್ತರ ಮೇಲೆ ದುಷ್ಕರ್ಮಿಗಳ ತಂಡ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಮೂವರು ಪತ್ರಕರ್ತರ ಪೈಕಿ ಮಹಿಳಾ ವರದಿಗಾರ್ತಿಗೆ ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ನಡೆದ ರಾಮ ಮಂದಿರ ಭೂಮಿ ಪೂಜೆ ಸಮಾರಂಭದ ನಂತರ ಆ ರಾತ್ರಿ ಈ ಪ್ರದೇಶದಲ್ಲಿ ಉಂಟಾಗಿದ್ದ ಮತೀಯ ಉದ್ವಿಗ್ನತೆ ಕುರಿತಂತೆ ವರದಿ ಮಾಡಲು ಪ್ರಭಜಿತ್ ಸಿಂಗ್ ಹಾಗೂ ಶಾಹಿದ್ ತಂತ್ರಯ್ ಎಂಬ ಇಬ್ಬರು ವರದಿಗಾರರು ತಮ್ಮ ಮಹಿಳಾ ಸಹೋದ್ಯೋಗಿಯೊಬ್ಬರೊಂದಿಗೆ ತೆರಳಿದ್ದ ಸಂದರ್ಭ ಘಟನೆ ನಡೆದಿದೆ.

ರಾಮ ಮಂದಿರ ಭೂಮಿ ಪೂಜೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಗುಂಪೊಂದು ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿ  ಅಲ್ಲಿನ ಸುಭಾಶ್ ಮೊಹಲ್ಲಾದ ಗೇಟುಗಳಲ್ಲಿ ಕೇಸರಿ ಧ್ವಜಗಳನ್ನಿರಿಸಿತ್ತೆನ್ನಲಾಗಿದೆ. ಈ ಕುರಿತು ವರದಿ ಮಾಡಲು ತೆರಳಿದ್ದ ಪತ್ರಕರ್ತರಿಗೆ ದುಷ್ಕರ್ಮಿಗಳ ಗುಂಪು ದೈಹಿಕ ಹಲ್ಲೆ ನಡೆಸಿ, ಕೊಲೆ ಬೆದರಿಕೆಯೊಡ್ಡಿ  ನಿಂದಿಸಿದೆ. ಅವರಲ್ಲೊಬ್ಬ ಕೇಸರಿ ಕುರ್ತಾ ಧರಿಸಿದ್ದ ವ್ಯಕ್ತಿ ತನ್ನನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂದು ಹೇಳಿಕೊಂಡಿದ್ದ ಎಂದು ಟ್ವೀಟ್ ಮೂಲಕ ಕಾರವಾನ್ ನೀಡಿದ ಹೇಳಿಕೆಯಲ್ಲಿ ವಿವರಿಸಲಾಗಿದೆ.

ತಂತ್ರಯ್ ಹೆಸರು ತಿಳಿಯುತ್ತಿದ್ದಂತೆಯೇ ಬಿಜೆಪಿ ಪ್ರಧಾನ ಕಾರ್ಯದರ್ಶಿ ತಾನೆಂದು ಹೇಳಿಕೊಂಡಿದ್ದ ವ್ಯಕ್ತಿ ಸಹಿತ ಇತರರು ಆತನ ಮೇಲೆ ಹಲ್ಲೆಗೈದು ಆತನ ಧರ್ಮವನ್ನು ನಿಂದಿಸಿದ್ದಾರೆ. ಸ್ಥಳೀಯ ಪೊಲೀಸರು ತಕ್ಷಣ ಪತ್ರಕರ್ತರನ್ನು  ಸ್ಥಳೀಯ ಭಜನಪುರ ಠಾಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ತಾನು ಅಲ್ಲಿರದೇ ಇರುತ್ತಿದ್ದರೆ ಆ ಕೇಸರಿ ವಸ್ತ್ರಧಾರಿ ವ್ಯಕ್ತಿಗಳು ಶಾಹಿದ್ ಮುಸ್ಲಿಂ ಎಂಬ ಕಾರಣಕ್ಕೆ ಆತನನ್ನು ಥಳಿಸಿ ಸಾಯಿಸುತ್ತಿದ್ದರು ಎಂದು ಪ್ರಭಜಿತ್ ಸಿಂಗ್ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.

ಅವರ ಜತೆಗಿದ್ದ ಮಹಿಳಾ ಸಹೋದ್ಯೋಗಿ ದಾಳಿಕೋರರಿಂದ ತಪ್ಪಿಸಿ ಹತ್ತಿರದ ಗಲ್ಲಿಗೆ ಓಡಿದರೂ ಅಲ್ಲಿ ಆಕೆಯನ್ನು ಸುತ್ತುವರಿದ ದುಷ್ಕರ್ಮಿಗಳ ಗುಂಪೊಂದು ಆಕೆಯ ಅನುಮತಿಯಿಲ್ಲದೆ ಫೋಟೋ, ವೀಡಿಯೋಗಳನ್ನು ತೆಗೆದಿದ್ದಾರೆ. ಅಲ್ಲದೆ ಅವರಲ್ಲೊಬ್ಬ ತನ್ನ ಖಾಸಗಿ ಅಂಗಗಳನ್ನು ತೋರಿಸಿ, ವಿಕೃತವಾಗಿ ವರ್ತಿಸಿ ಆಕೆಗೆ ಕಿರುಕುಳ ನೀಡಿದ್ದಾನೆಂದು ಆರೋಪಿಸಲಾಗಿದೆ.

ಘಟನೆಗೆ ಸಂಬಂಧಿಸಿ ದೂರು ದಾಖಲಿಸಿರುವ  ಹೊರತಾಗಿಯೂ ದಿಲ್ಲಿ ಪೊಲೀಸರು ಎಫ್ ಐಆರ್ ದಾಖಲಿಸಲು ತಡ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಇದೀಗ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ ಎಂದು theweek.in ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News