ಸೋಂಕು ನಿವಾರಕ ಸುರಂಗಗಳ ನಿಷೇಧಕ್ಕೆ ಮೊರೆ: ಕೇಂದ್ರಕ್ಕೆ ಸರ್ವೋಚ್ಚ ನ್ಯಾಯಾಲಯದ ನೋಟಿಸ್

Update: 2020-08-12 15:15 GMT

ಹೊಸದಿಲ್ಲಿ,ಆ.12: ಕೊರೋನ ವೈರಸ್ ಹರಡುವಿಕೆಯನ್ನು ತಡೆಯಲು ಸ್ಥಾಪಿಸಲಾಗಿರುವ ಸೋಂಕು ನಿವಾರಕ ಸುರಂಗಗಳ ಬಳಕೆ, ಸ್ಥಾಪನೆ,ಉತ್ಪಾದನೆ ಮತ್ತು ಜಾಹೀರಾತುಗಳನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಕೇಂದ್ರಕ್ಕೆ ನೋಟಿಸ್ ಜಾರಿಗೊಳಿಸಿದ್ದು,ಎರಡು ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ,ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯಗಳಿಗೆ ನೋಟಿಸ್‌ಗಳನ್ನು ಹೊರಡಿಸಿ ನ್ಯಾ.ಅಶೋಕ್ ಭೂಷಣ್ ನೇತೃತ್ವದ ಪೀಠವು ಆದೇಶಿಸಿದೆ.

  ಕೋವಿಡ್-19ರ ಹರಡುವಿಕೆಯನ್ನು ತಡೆಯುವ ನೆಪದಲ್ಲಿ ಹಲವಾರು ನಿರ್ಮಲೀಕರಣ ಮತ್ತು ಸೋಂಕು ನಿವಾರಕ ಸಾಧನಗಳು ಬಂದಿದ್ದು, ಇವು ವೈರಸ್ ಹರಡುವಿಕೆಯನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿವೆ ಎಂದು ತಪ್ಪು ಹೇಳಿಕೆಗಳನ್ನು ನೀಡಲಾಗುತ್ತಿದೆ. ಸೋಂಕು ನಿವಾರಕಗಳ ಸಿಂಪಡಣೆ ಮತ್ತು ಧೂಮೀಕರಣವನ್ನು ಒಳಗೊಂಡ ಸೋಂಕು ನಿವಾರಕ ಸುರಂಗಗಳು ಇವುಗಳಲ್ಲಿ ಸೇರಿವೆ. ಈ ಸುರಂಗಗಳು ಜನರನ್ನು ಸೋಂಕುಮುಕ್ತಗೊಳಿಸುವುದಾಗಿ ಹೇಳಿ ಅವರನ್ನು ಅಲ್ಟ್ರಾವಯಲೆಟ್ ಕಿರಣಗಳ ಅಪಾಯಕ್ಕೆ ಒಡ್ಡುತ್ತಿವೆ ಎಂದು ಕಾನೂನು ವಿದ್ಯಾರ್ಥಿ ಗುರುಸಿಮ್ರನ್ ಸಿಂಗ್ ನರುಲಾ ತನ್ನ ಅರ್ಜಿಯಲ್ಲಿ ಹೇಳಿದ್ದಾರೆ.

ಇಂತಹ ಸುರಂಗಗಳ ನಿರುಪಯುಕ್ತತೆ ಮತ್ತು ಅಪಾಯಕಾರಿ ಪರಿಣಾಮಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮತ್ತುವಿಶ್ವಾದ್ಯಂತದ ಇತರ ಹಲವಾರು ವೈಜ್ಞಾನಿಕ ಪ್ರಾಧಿಕಾರಗಳು ಎಚ್ಚರಿಕೆಯನ್ನೂ ನೀಡಿವೆ ಎಂದು ನರುಲಾ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News