ರಾಹತ್ ಇಂದೋರಿ ಕೆಲವು ಝಲಕ್‌ಗಳು

Update: 2020-08-13 09:45 GMT

ಖ್ಯಾತ ಉರ್ದು ಕವಿ ರಾಹತ್ ಇಂದೋರಿ ಮಂಗಳವಾರ(ಆ.11) ನಿಧನರಾಗಿದ್ದಾರೆ. ಅವರ ಪದ್ಯಗಳ ಕೆಲವು ಝಲಕ್ ಇಲ್ಲಿವೆ.

ಇಂದು ಗದ್ದುಗೆಯಲ್ಲಿರುವವರು ನಾಳೆ ಇರಲಾರರು,
ಬಾಡಿಗೆದಾರರೇ ಎಲ್ಲರೂ, ಯಾರೂ ಮನೆ ಮಾಲಕರಲ್ಲವಲ್ಲ !
****

ಎಲ್ಲರ ರಕ್ತ ಬೆರೆತಿದೆ ಇಲ್ಲಿನ ಮಣ್ಣಿನಲಿ ಭಾರತವೆಂಬುದು ಯಾರಪ್ಪನ ಸೊತ್ತೂ ಅಲ್ಲವಲ್ಲ

****

ಬಿರುಗಾಳಿಗಳ ಮುಂದೆ ಸೆಟೆದು ನಿಲ್ಲಿರಿ, ಪ್ರವಾಹಗಳ ಮೇಲೆ ಪ್ರಹಾರ ಮಾಡಿರಿ,
ಅಂಬಿಗರನ್ನು ಓಲೈಸುವ ಉಸಾಬರಿ ಬೇಡ,
ಈಜಾಡಿಯೇ ನದಿ ದಾಟಿ ದಡ ಸೇರಿರಿ.

****

ಹೂವುಗಳಂಗಡಿ ತೆರೆಯಿರಿ, ಸುಗಂಧದ ವ್ಯಾಪಾರ ನಡೆಸಿರಿ
ಪ್ರೀತಿಸುವುದು ತಪ್ಪಾದರೆ ನೂರುಬಾರಿ ಅದೇ ತಪ್ಪು ಮಾಡಿರಿ

****

ತುರ್ತು ಪರಿಸ್ಥಿತಿಯ ಕಾಲದಲ್ಲಿ ನಾನು ಸರಕಾರ ಭ್ರಷ್ಟವಾಗಿದೆ ಎಂದೆ. ಮರುದಿನ ಪೊಲೀಸ್ ಠಾಣೆಯಿಂದ ಬುಲಾವ್ ಬಂತು. ಅಲ್ಲಿ ಠಾಣಾಧಿಕಾರಿಯ ಮುಂದೆ ಹಾಜರಾಗಿ ನಾನು ಸರಕಾರ ಭ್ರಷ್ಟ ಎಂದು ಮಾತ್ರ ಹೇಳಿದ್ದೇನೆ. ಯಾವ ಸರಕಾರ ಎಂದು ಹೇಳಿಲ್ಲ. ಅದು ಪಾಕಿಸ್ತಾನ ಅಥವಾ ಅಮೆರಿಕ ಸರಕಾರವೂ ಆಗಿರಬಹುದು ಎಂದೆ. ಅದಕ್ಕೆ ನಕ್ಕ ಆ ಠಾಣಾಧಿಕಾರಿ ಹೇಳಿದ. ನೀವು ನಮ್ಮನ್ನು ಮೂರ್ಖರೆಂದು ತಿಳಿದಿದ್ದೀರಾ? ಎಲ್ಲಿಯ ಸರಕಾರ ಭ್ರಷ್ಟವಾಗಿದೆ ಎಂದು ನಮಗೆ ಗೊತ್ತಿಲ್ಲವೇ?

****

ವಿರೋಧ ಇದ್ದರೆ ಇರಲಿ ಬಿಡಿ, ಅದೇನು ಜೀವ ಅಲ್ಲ
ಇದೆಲ್ಲ ಹೊಗೆ ಮಾತ್ರ, ಆಕಾಶವೇನೂ ಅಲ್ಲ
ಇಲ್ಲಿ ಬೆಂಕಿ ಬಿದ್ದರೆ ಎಲ್ಲರ ಮನೆಗಳೂ ಸುಡಲಿವೆ
ಇಲ್ಲಿ ನಮ್ಮ ಮನೆ ಮಾತ್ರ ಇರುವುದಲ್ಲ
ನನಗೆ ಗೊತ್ತು, ಶತ್ರುಗಳೇನು ಕಮ್ಮಿ ಇಲ್ಲ
ಆದರೆ ನಮ್ಮ ಹಾಗೆ ಅವರು ಅಂಗೈಯಲ್ಲಿ
ಜೀವ ಇಟ್ಟುಕೊಂಡಿಲ್ಲ

****

ನಮ್ಮ ಬಾಯಿಂದ ಹೊರಟಿದ್ದೇ ಸತ್ಯ
ನಮ್ಮ ಬಾಯಲ್ಲಿ ನಿಮ್ಮ ನಾಲಗೆ ಇಲ್ಲ

****

ಈ ನಕ್ಷತ್ರಗಳಿಗೆ ಹಾಗೇ ಸ್ವಲ್ಪ ನಿದ್ರೆ ಬರಲಿ ಎಂದು ಕಾಯುತ್ತಿದ್ದೇನೆ

ಸುಮ್ಮನೆ ಸನ್ನೆಯಲ್ಲೇ ಚಂದ್ರನನ್ನು ಮಾಳಿಗೆಗೆ ಕರೆಸಿಕೊಳ್ಳುತ್ತೇನೆ

****

ನನ್ನ ಆರೋಗ್ಯ ಕೆಟ್ಟಿದೆ ಎಂಬ ವದಂತಿ ಹಬ್ಬಿತ್ತು ಎಲ್ಲೆಡೆ ಹೇಗಿದ್ದೀರಿ? ಎಂದು ಕೇಳಿ ಕೇಳಿ ಜನರು ನನ್ನನ್ನು ರೋಗಿಯಾಗಿಸಿಬಿಟ್ಟರು ಕೇವಲ ಎರಡು ಗಜವಾದರೇನಂತೆ, ಓ ಮರಣವೇ! ನನ್ನ ಗೋರಿಗೆ ನಾನು ಮಾಲಕನಲ್ಲವೇ? ನೀನು ಬಂದು ನನ್ನನ್ನು ಜಮೀನುದಾರನಾಗಿಸಿ ಬಿಟ್ಟೆಯಲ್ಲವೇ?

****

ಕಳ್ಳ ಕಾಕರನ್ನು ಗೌರವಿಸಲು ಕಲಿಯಿರಿ ಯಾರು ಯಾವಾಗ ಸಚಿವರಾಗುವರೋ, ಯಾರು ಬಲ್ಲರು?

****

ಒಂದಿಲ್ಲೊಂದು ದಿನ ಮನದ ಲೋಕವನ್ನು ಸರ್ವನಾಶ ಮಾಡುವೆನು ನಾನು ಸುಟ್ಟುಬಿಡಲಾಗದೆನ್ನಲು ಇದೇನು ನಿನ್ನ ಪ್ರೇಮ ಪತ್ರವಲ್ಲ ತಾನೇ? 

Writer - ಹಾಜಿರಾ

contributor

Editor - ಹಾಜಿರಾ

contributor

Similar News