ಶೇ.70ನ್ನು ದಾಟಿದ ಭಾರತದ ಕೋವಿಡ್ ಚೇತರಿಕೆ ದರ

Update: 2020-08-12 17:25 GMT

ಹೊಸದಿಲ್ಲಿ,ಆ.12: ದೇಶದಲ್ಲಿ ಕೋವಿಡ್-19 ಚೇತರಿಕೆ ದರವು ಬುಧವಾರ ಶೇ.70ನ್ನು ದಾಟಿದ್ದು,ಈವರೆಗೆ ಒಟ್ಟು 16,39,599 ರೋಗಿಗಳು ಗುಣಮುಖರಾಗಿದ್ದಾರೆ. ಒಟ್ಟು ಪ್ರಕರಣಗಳ ಪೈಕಿ ಕೇವಲ ಶೇ.27.64ರಷ್ಟು ಪ್ರಕರಣಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಇಂದು ತಿಳಿಸಿದೆ. ಕೋವಿಡ್ ಸಾವುಗಳ ಪ್ರಮಾಣ ಇನ್ನಷ್ಟು ಕಡಿಮೆಯಾಗಿದ್ದು,ದರವು ಶೇ.1.98ಕ್ಕೆ ಇಳಿದಿದೆ ಎಂದೂ ಅದು ಹೇಳಿದೆ.

ಪರಿಣಾಮಕಾರಿ ನಿಯಂತ್ರಣ ಕಾರ್ಯತಂತ್ರ ಮತ್ತು ಆಕ್ರಮಣಕಾರಿ ಮತ್ತು ಸಮಗ್ರ ಪರೀಕ್ಷಾ ವ್ಯವಸ್ಥೆಯ ಯಶಸ್ವಿ ಅನುಷ್ಠಾನದ ಜೊತೆಗೆ ಗಂಭೀರ ರೋಗಿಗಳ ಪ್ರಮಾಣಿತ ಕ್ಲಿನಿಕಲ್ ನಿರ್ವಹಣೆಯಿಂದಾಗಿ ಒಂದು ದಿನದಲ್ಲಿ ದಾಖಲೆಯ 56,110 ರೋಗಿಗಳ ಚೇತರಿಕೆಯು ಸಾಧ್ಯವಾಗಿದೆ ಎಂದು ಸಚಿವಾಲಯವು ತಿಳಿಸಿದೆ.

ಕೇಂದ್ರ,ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳ ಸಂಘಟಿತ ಪ್ರಯತ್ನಗಳಿಂದಾಗಿ ದೈನಂದಿನ ಚೇತರಿಕೆ ಪ್ರಮಾಣವನ್ನು ನಿರಂತರವಾಗಿ ಹೆಚ್ಚಿಸಲು ಸಾಧ್ಯವಾಗುತ್ತಿದೆ ಎಂದು ಹೇಳಿರುವ ಅದು,ಜುಲೈ ಮೊದಲ ವಾರದಲ್ಲಿ ಪ್ರತಿದಿನ ಸರಾಸರಿ 15,000 ರೋಗಿಗಳು ಗುಣಮುಖರಾಗುತ್ತಿದ್ದು,ಆಗಸ್ಟ್ ಮೊದಲ ವಾರದ ವೇಳೆಗೆ ಇದು 50,000 ದಾಟಿತ್ತು. ಈವರೆಗೆ ಗುಣಮುಖರಾಗಿರುವ ರೋಗಿಗಳ ಸಂಖ್ಯೆ 16 ಲ. ದಾಟಿದ್ದು,ಚೇತರಿಕೆ ದರವು ಶೇ.70.38ರ ಹೊಸ ಎತ್ತರಕ್ಕೇರಿದೆ. ಸದ್ಯ ದೇಶದಲ್ಲಿ 6,43,948 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿಸಿದೆ.

ಮಂಗಳವಾರ 24 ಗಂಟೆಗಳಲ್ಲಿ 7,33,449 ಪರೀಕ್ಷೆಗಳನ್ನು ನಡೆಸುವುದರೊಂದಿಗೆ ಭಾರತದ ‘ಪರೀಕ್ಷೆ,ಅನುಸರಣೆ,ಚಿಕಿತ್ಸೆ ’ಕಾರ್ಯತಂತ್ರವು ಹೊಸ ಎತ್ತರವನ್ನು ಸಾಧಿಸಿದ್ದು,ಕೊರೋನ ವೈರಸ್ ಪರೀಕ್ಷೆಗಳ ಒಟ್ಟು ಸಂಖ್ಯೆ 2.5 ಕೋ.ದಾಟಿದೆ. ಪ್ರತಿ ಹತ್ತು ಲಕ್ಷ ಜನರಲ್ಲಿ ಪರೀಕ್ಷಾ ಪ್ರಮಾಣವು 18,852ಕ್ಕೇರಿದೆ ಎಂದೂ ಸಚಿವಾಲಯವು ಹೇಳಿದೆ.

 ಭಾರತದಲ್ಲಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ 23 ಲ.ದಾಟಿದ್ದು,ಬುಧವಾರ ಬೆಳಿಗ್ಗೆ ಎಂಟು ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ 60,963 ಹೊಸ ಪ್ರಕರಣಗಳು ವರದಿಯಾಗಿವೆ. ಈ ಅವಧಿಯಲ್ಲಿ 834 ಜನರು ಸಾವನ್ನಪ್ಪಿದ್ದು,ಒಟ್ಟು ಸಾವುಗಳ ಸಂಖ್ಯೆ 46,091ಕ್ಕೇರಿದೆ.

                            

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News