ಬೆಚ್ಚಿ ಬೀಳಿಸುವ ಘಟನೆ: ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಶವ ನಾಯಿಪಾಲು

Update: 2020-08-13 04:11 GMT
ಸಾಂದರ್ಭಿಕ ಚಿತ್ರ

ಓಂಗೋಲ್ (ಆಂಧ್ರ ಪ್ರದೇಶ), ಆ.13: ಇಲ್ಲಿನ ರಾಜೀವ್‌ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಆರ್‌ಐಎಂಎಸ್) ಆಸ್ಪತ್ರೆಯಲ್ಲಿ ಮುಖದ ಮೇಲೆ ನಾಯಿ ಕಚ್ಚಿದ ಗಾಯದ ಗುರುತುಗಳಿದ್ದ, ಒಂದು ಕಿವಿ ಇಲ್ಲದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿರುವುದು ಜನಸಾಮಾನ್ಯರನ್ನು ಬೆಚ್ಚಿ ಬೀಳಿಸಿದೆ. ನಿರ್ಗತಿಕರು ಹಾಗೂ ಬಡವರು ಬಳಸುತ್ತಿದ್ದ ಶೆಡ್‌ನಲ್ಲಿ ಈ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ಬೀದಿನಾಯಿಗಳು ಈ ಸಂತ್ರಸ್ತ ವ್ಯಕ್ತಿಯ ಕಿವಿಗಳನ್ನು ಕಚ್ಚುತ್ತಿದ್ದುದನ್ನು ಸೋಮವಾರ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ನೋಡಿದ್ದಾರೆ. ಈತ ಪ್ರಕಾಶಮ್ ಜಿಲ್ಲೆಯ ಜರುಗುಮಲ್ಲಿ ತಾಲೂಕು ಬಿಟ್ರಗುಂಡ ಎಂಬ ಗ್ರಾಮದ ಕಾಂತಾ ರಾವ್ ಎಂದು ತಿಳಿದುಬಂದಿದೆ. ಮೃತದೇಹಕ್ಕೆ ಯಾರೂ ವಾರಸುದಾರರು ಇರಲಿಲ್ಲ. ವ್ಯಕ್ತಿ ಮೃತಟ್ಟಿದ್ದು ಗಮನಕ್ಕೆ ಬಂದ ಬಳಿಕ ಭದ್ರತಾ ಸಿಬ್ಬಂದಿ ನಾಯಿಯನ್ನು ಓಡಿಸಿದ್ದಾರೆ.

ರಿಮ್ಸ್ ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯವನ್ನು ಖಂಡಿಸಿ ಕಾಂತಾರಾವ್ ಸಂಬಂಧಿಕರು ಆಸ್ಪತ್ರೆಯಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಈ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡಿರಲಿಲ್ಲ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ವೈದ್ಯಕೀಯ ಅಧೀಕ್ಷಕರು ಹೇಳುವಂತೆ ರಿಮ್ಸ್‌ಗೆ ಈ ವ್ಯಕ್ತಿಯನ್ನು ಆಗಸ್ಟ್ 5ರಂದು ಕರೆ ತರಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡಿಲ್ಲ. ಕಾಂತಾರಾವ್ ಅವರನ್ನು ಏಕೆ ದಾಖಲಿಸಿಕೊಂಡಿಲ್ಲ ಹಾಗೂ ಐದು ದಿನ ಕಾಲ ಯಾವ ಚಿಕಿತ್ಸೆಯೂ ಇಲ್ಲದೇ ಶೆಡ್‌ನಲ್ಲಿ ಏಕೆ ಉಳಿದುಕೊಂಡಿದ್ದರು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಸಂಬಂಧಿಕರು ಹೇಳುವಂತೆ ಕೊರೋನ ಟೆಸ್ಟಿಂಗ್‌ನಲ್ಲಿ ಪಾಸಿಟಿವ್ ಬಂದ ಬಳಿಕ ಕಾಂತಾರಾವ್ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಅವರನ್ನು ದಾಖಲಿಸಿಕೊಂಡ ಬಗ್ಗೆ ಯಾವುದೇ ದಾಖಲೆ ಇಲ್ಲ ಎಂದು ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮುಲು ಹೇಳಿದ್ದಾರೆ.

ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರು ಈ ಘಟನೆಯ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ, ಮಾನವ ಘನತೆಯ ಗಂಭೀರ ಉಲ್ಲಂಘನೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News