ಕರ್ತವ್ಯದಲ್ಲಿದ್ದ ಯೋಧನ ನಿಗೂಢ ನಾಪತ್ತೆ: 16 ವರ್ಷಗಳು ಕಳೆದರೂ ಸಿಗದ ಸುಳಿವು

Update: 2020-08-13 07:07 GMT

ಉಪ್ಪಿನಂಗಡಿ, ಆ.13: ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದಾಗಲೇ ಯೋಧನೊಬ್ಬ ನಾಪತ್ತೆಯಾಗಿದ್ದು, ಈತ ಎಲ್ಲಿದ್ದಾನೆ? ಏನಾಗಿದ್ದಾನೆ ಎಂಬುದು 16 ವರ್ಷಗಳೇ ಕಳೆದರೂ ಗೊತ್ತಾಗಿಲ್ಲ. ಈ ಯೋಧನ ಪತ್ನಿ ಕುಟುಂಬ ನಿರ್ವಹಣೆಗೆ ನನಗೊಂದು ಸರಕಾರಿ ಉದ್ಯೋಗ ನೀಡಿ ಎಂದು ಪರಿಪರಿಯಾಗಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕುಟುಂಬದ ಆಧಾರ ಸ್ತಂಭವೇ ಕಳೆದು ಹೋಗಿದ್ದರಿಂದ ಸಂಕಷ್ಟಕ್ಕೀಡಾಗಿರುವ ಯೋಧನ ಕುಟುಂಬಕ್ಕೆ ಸಿಕ್ಕಿದ್ದು, ಕೊನೆಗೂ ಭರವಸೆಯ ಮಾತುಗಳು ಮಾತ್ರ. ಇಲ್ಲಿ ಜನಪ್ರತಿನಿಧಿಗಳೆನಿಸಿಕೊಂಡವರು ಯೋಧರ ಬಗೆಗಿನ ಅಭಿಮಾನ ಮಾತುಗಳು ವೇದಿಕೆಗಷ್ಟೇ ಸೀಮಿತವಾಗಿದೆ.

ಇದು ಗಡಿ ಭದ್ರತಾ ಪಡೆಯ ವೀರ ಯೋಧ ಪೌಲ್ ಡಿಸೋಜರ ಕುಟುಂಬದ ಕಥೆ. ಮೂಲತಃ ಸಂಪಾಜೆ ಗ್ರಾಮದ ನೆಲ್ಲಿಕುಮೇರಿನ ನಿವಾಸಿಯಾಗಿರುವ ಪೌಲ್ ಡಿಸೋಜ ಭಾರತದ ಗಡಿ ಭದ್ರತಾ ಪಡೆಯ ಯೋಧ. ಅವರು ಜಮ್ಮುವಿನ ಇಂದ್ರೇಶ್ವರ ನಗರದ ಬಿಎಸ್‌ಎಫ್‌ನ 60ನೇ ಬೆಟಾಲಿಯನ್‌ನ ಯುನಿಟ್‌ನಲ್ಲಿ ಕಾನ್‌ಸ್ಟೇಬಲ್ ಆಗಿದ್ದರು. ತನ್ನ 12 ವರ್ಷದ ಕರ್ತವ್ಯದ ಅವಧಿಯಲ್ಲಿ 2004ರ ನವೆಂಬರ್ 8ರಂದು ಬೆಳಗ್ಗೆ ಕರ್ತವ್ಯಕ್ಕೆಂದು ತೆರಳಿದ ಇವರು ಕರ್ತವ್ಯದ ಸ್ಥಳದಿಂದಲೇ ನಿಗೂಢವಾಗಿ ನಾಪತ್ತೆಯಾಗಿದ್ದರು. ಅವರ ಬಗ್ಗೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.

ಪುತ್ತೂರು ತಾಲೂಕಿನ 34 ನೆಕ್ಕಿಲಾಡಿಯ ಮೇರಿ ಡಯಾನಾ ವೇಗಸ್‌ರನ್ನು 2002ರಲ್ಲಿ ವಿವಾಹವಾಗಿದ್ದ ಪೌಲ್ ಡಿಸೋಜ ಮದುವೆಯಾದ ಬಳಿಕ ಕೆಲ ದಿನಗಳಲ್ಲೇ ಸೇನೆಗೆ ಕರ್ತವ್ಯಕ್ಕೆ ತೆರಳಿದ್ದರು. ಅದಾದ ಬಳಿಕ ಒಂದು ತಿಂಗಳ ರಜೆಗೆ ಬಂದು ಪತ್ನಿಯೊಂದಿಗಿದ್ದು, ತೆರಳಿದವರು ಮತ್ತೆ ಬಂದಿದ್ದು ತನ್ನ ಮಗುವಿಗೆ ಆರೂವರೆ ತಿಂಗಳಾದಾಗ. ಆ ಬಳಿಕ ರಜೆ ಮುಗಿಸಿ ಮನೆಯಿಂದ ಹೋದವರು ಮತ್ತೆ ಹಿಂದಿರುಗಿ ಬರಲೇ ಇಲ್ಲ.

ಡಯಾನಾ ವೇಗಸ್ ತನ್ನ ಪುತ್ರಿಯೊಂದಿಗೆ

2004ರ ನವೆಂಬರ್ 8ರಂದು ರಾತ್ರಿ 11 ಗಂಟೆ ಸುಮಾರಿಗೆ ಸೇನೆಗೆ ಸಂಬಂಧಪಟ್ಟ ಅಧಿಕಾರಿಗಳು ಪೌಲ್ ಡಿಸೋಜರ ಪತ್ನಿಗೆ ದೂರವಾಣಿ ಕರೆ ಮಾಡಿ, ‘‘ನಿಮ್ಮ ಪತಿ ಬೆಳಗ್ಗೆ ಕರ್ತವ್ಯಕ್ಕೆ ತೆರಳಿದವರು ಸಂಜೆ ಮರಳಿ ಬಂದಿಲ್ಲ. ಅವರ ಬಗ್ಗೆ ಮಾಹಿತಿ ನಿಮಗೇನಾದರೂ ಸಿಕ್ಕರೆ ನಮಗೆ ತಿಳಿಸಬೇಕು’’ ಎಂದು ತಿಳಿಸಿದ್ದರು. ಇವರ ಪತ್ತೆಗೆ ಸೇನೆಯ ತನಿಖೆ ನಡೆಯಿತು. ಆದರೂ ಇವರ ಸುಳಿವಂತೂ ಸಿಗಲಿಲ್ಲ. ಬಳಿಕ ಇವರ ಪತ್ನಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲೂ ನಾಪತ್ತೆ ಪ್ರಕರಣ ದಾಖಲಿಸಿದ್ದರು. ವರ್ಷಗಳು ಉರುಳಿತೇ ವಿನಹ ಇವರು ಎಲ್ಲಿದ್ದಾರೆ? ಏನಾಗಿದ್ದಾರೆ? ಎಂಬ ಮಾಹಿತಿ ಬರಲೇ ಇಲ್ಲ. ಕೊನೆಗೇ ಈ ಪ್ರಕರಣವೂ ತೆರೆಮರೆಗೆ ಸರಿಯಿತು.

ಪೌಲ್ ನಾಪತ್ತೆಯ ಬಳಿಕ ಅವರ ಮನೆಯ ಆಧಾರ ಸ್ತಂಭವೇ ಕುಸಿದು ಬಿದ್ದಂತಹ ಪರಿಸ್ಥಿತಿ ಇವರ ಮನೆಯದ್ದಾಯಿತು. ಮಗಳ ಹಾಗೂ ಮನೆಯ ಜವಾಬ್ದಾರಿಯೆಲ್ಲಾ ಪೌಲ್‌ರ ಪತ್ನಿ ಮೇರಿ ಡಯಾನ ಅವರ ಹೆಗಲೇರಿತ್ತು. ಮೇರಿ ಬಿಎಡ್, ಎಂ.ಎ. ಪದವೀಧರೆ. ಮಾನವೀಯ ನೆಲೆಯಲ್ಲಿ ನನಗಾದರೂ ಒಂದು ಸರಕಾರಿ ಉದ್ಯೋಗ ದೊರಕಿಸಿ ಕೊಡಿ ಎಂದು ಕಂಡಕಂಡವರಲ್ಲಿ ಅಂಗಲಾಚಿದರು. ಬೆಂಗಳೂರಿಗೆಲ್ಲಾ ಹೋಗಿ ಬಂದರು. ದೇಶ ಸೇವೆಗೆ ಹೋದ ಪತಿ ಏನಾಗಿದ್ದಾರೆ? ಎಲ್ಲಿ ಹೋಗಿದ್ದಾರೆ ಅನ್ನೋದು ಗೊತ್ತಿಲ್ಲ. ಕುಟುಂಬದ ಆಧಾರ ಸ್ತಂಭವಾಗಿದ್ದ ಅವರಿಲ್ಲದೆ ನಮಗೆ ಬದುಕು ನಡೆಸುವುದೇ ದುಸ್ತರವಾಗಿದೆ. ಆದ್ದರಿಂದ ನನಗೊಂದು ಸರಕಾರಿ ಉದ್ಯೋಗ ಕೊಡಿ ಅನ್ನೋ ಮೇರಿ ಡಯಾನ ಅವರ ಮನವಿ ಯಾರಿಗೂ ಕೇಳಿಸಲೇ ಇಲ್ಲ.

ಇವೆಲ್ಲದರಿಂದ ನಿರಾಶರಾದ ಮೇರಿ ಬದುಕಿನ ಬಂಡಿ ಸಾಗಿಸಲು ಖಾಸಗಿ ಶಾಲೆಯಲ್ಲಿ ಶಿಕ್ಷಕ ವೃತ್ತಿಗೆ ಸೇರಿದರು. ಅದರಲ್ಲಿ ಬರುವ ಸಣ್ಣ ಸಂಬಳದಲ್ಲಿ ಮನೆಯ ಜವಾಬ್ದಾರಿ ವಹಿಸಿಕೊಂಡು ಮಗಳನ್ನು ಓದಿಸುತ್ತಿದ್ದಾರೆ. ಇವರ ಪುತ್ರಿ ಮೆಲೀಟಾ ಫ್ರಾನ್ಸಿಯಾ ಡಿೋಜ ಈಗ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ.

ಕೋವಿಡ್ ಕಾಲದಲ್ಲಿ ಸಂಕಷ್ಟ: ಮೇರಿ ಡಯಾನ ಅವರು ಶಾಲೆಯಲ್ಲಿ ಶಿಕ್ಷಕಿಯಾಗಿ ವೃತ್ತಿ ಮಾಡುತ್ತಿದ್ದಾಗ ಸಣ್ಣ ಸಂಬಳವಾದರೂ ಬರುತ್ತಾ ಇತ್ತು. ಆದರೆ ಈ ವರ್ಷ ಕೋವಿಡ್-19ನಿಂದಾಗಿ ಶಾಲೆಗಳು ಆರಂಭವಾಗಿಲ್ಲ. ಆದ್ದರಿಂದ ಅವರ ಕೆಲಸಕ್ಕೂ ಈಗ ಕುತ್ತು ಬಂದಿದೆ. ತೀರಾ ಸಂಕಷ್ಟದ ಪರಿಸ್ಥಿತಿಯಲ್ಲಿ ವೀರ ಯೋಧನ ಪತ್ನಿಯೋರ್ವರು ಬದುಕಿಗಾಗಿ, ಮಗಳ ಭವಿಷ್ಯಕ್ಕಾಗಿ ಹೋರಾಡುತ್ತಿದ್ದಾರೆ.

ನನ್ನ ಪತಿ ಭೂ ಸೇನೆಯಲ್ಲಿ ಕರ್ತವ್ಯದಲ್ಲಿದ್ದು, ಒಟ್ಟು 20 ವರ್ಷ ಸರ್ವೀಸ್ ಮಾಡುವ ಬಗ್ಗೆ ಬಾಂಡ್ ನೀಡಿದ್ದರು. ಅದರಲ್ಲಿ 12 ವರ್ಷ ಸರ್ವಿಸ್ ಮುಗಿಸಿದ್ದರು. 2004ರಲ್ಲಿ ಅವರು ನಿಗೂಢ ನಾಪತ್ತೆಯಾಗಿದ್ದಾರೆ. ಅವರು ನಾಪತ್ತೆಯಾಗಿ 16 ವರ್ಷಗಳಾಗುತ್ತಾ ಬಂದರೂ ಅವರು ಏನಾಗಿದ್ದಾರೆ ಎಂಬುದಕ್ಕೆ ಉತ್ತರ ಸಿಕ್ಕಿಲ್ಲ.

ಈ ಘಟನೆಯಾಗುವಾಗ ನಮ್ಮ ಪುತ್ರಿ ಮೆಲೀಟಾ ಫ್ರಾನ್ಸಿಯಾ ಡಿಸೋಜ ಹಸುಗೂಸು. ಆಕೆಗೆ ತಂದೆಯನ್ನು ನೋಡಿದ ನೆನಪಿಲ್ಲ. ನಮ್ಮ ಕುಟುಂಬಕ್ಕೆ ಆಧಾರವಾಗಿದ್ದ ಅವರು ಇಲ್ಲದ್ದರಿಂದ ಸಂಕಷ್ಟದ ಬದುಕು ನನ್ನದಾಗಿತ್ತು. ನನಗೊಂದು ಸರಕಾರಿ ನೌಕರಿ ಕೊಡಿಸಿ, ಜೀವನ ನಿರ್ವಹಣೆ ಮಾಡುತ್ತೇನೆ ಎಂದು ಕಂಡಕಂಡವರಲ್ಲಿ ಅಂಗಲಾಚಿದೆ. ಆದರೆ ಕೊನೆಗೂ ನಿರಾಸೆ ಅನುಭವಿಸುವ ಸ್ಥಿತಿ ನನ್ನದಾಗಿತ್ತು.

ಕೆಲವರು ಅವರು ಕೆಲಸ ಮಾಡುತ್ತಿದ್ದ ಸೈನದ ಬೆಟಾಲಿಯನ್‌ಗೆ ಹೋಗಿ ಮಾತನಾಡಿ ಎಂದು ಸಲಹೆ ನೀಡಿದರು. ಆದರೆ ಅದು ಒಬ್ಬಂಟಿ ಹೆಂಗಸಾದ ನನ್ನಿಂದ ಸಾಧ್ಯವಾಗದ ಮಾತು. ಬಳಿಕ ನಾನು ಅದರ ಹಿಂದೆ ಹೋಗುವುದನ್ನು ಬಿಟ್ಟು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕುಟುಂಬದ ಜವಾಬ್ದಾರಿ ಹೊತ್ತಿದ್ದೇನೆ. ಸರಕಾರಿ ನೌಕರಿಯೊಂದು ಸಿಕ್ಕಿದ್ದರೆ ಭರವಸೆಯ ಬದುಕು ಸಾಧ್ಯವಿತ್ತು.

ಆದರೆ ಈಗ ಬದುಕೇ ಅತಂತ್ರವಾಗಿದೆ. ಯೋಧನ ಪತ್ನಿಯಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಆದರೆ ನನ್ನಂತಹ ಅವಸ್ಥೆ ಯಾವ ಯೋಧರ ಕುಟುಂಬದವರಿಗೂ ಬರಬಾರದು. ಯೋಧರ ಬಗ್ಗೆ ಅಭಿಮಾನ ಭಾಷಣಕ್ಕೆ ಮಾತ್ರ ಸೀಮಿತವಾಗಬಾರದು. ಹೃದಯದಲ್ಲೂ ಅದು ನೆಲೆಸಿರಬೇಕು.

| ಮೇರಿ ಡಯಾನಾ, ನಾಪತ್ತೆಯಾಗಿರುವ ಯೋಧನ ಪತ್ನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News