ರಾಜೀವ್ ತ್ಯಾಗಿ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ ಸಂಬಿತ್ ಪಾತ್ರಾ ವಿರುದ್ಧ ಆಕ್ರೋಶ: ಬಂಧನಕ್ಕೆ ಒತ್ತಾಯ

Update: 2020-08-13 09:35 GMT

ಹೊಸದಿಲ್ಲಿ: ಟಿವಿ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಕಾಂಗ್ರೆಸ್ ವಕ್ತಾರ ರಾಜೀವ್ ತ್ಯಾಗಿ ನಿನ್ನೆ ಮೃತಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲಿಗರು ಮತ್ತು ಟ್ವಿಟರಿಗರು ಟಿವಿ ಡಿಬೇಟ್ ಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು ಹಿಂಸಾಚಾರಕ್ಕೆ ಸಂಬಂಧಿಸಿ ಹಿಂದಿ ಸುದ್ದಿ ವಾಹಿನಿಯ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ತ್ಯಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಬೆಂಗಳೂರು ಹಿಂಸಾಚಾರಕ್ಕೆ ಸಂಬಂಧಿಸಿ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ತ್ಯಾಗಿ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಿದ್ದರು. ಚರ್ಚೆಯ ವೇಳೆ ಸಂಬಿತ್ ಪಾತ್ರಾ ಮತ್ತೆ ಮತ್ತೆ ತ್ಯಾಗಿಯವರನ್ನು ‘ದೇಶದ್ರೋಹಿ’ ಎನ್ನುತ್ತಿರುವ ವಿಡಿಯೋ ಟ್ವಿಟರ್ ನಲ್ಲಿ ವೈರಲ್ ಆಗಿದೆ.

“ವಿಷ ತುಂಬಿದ ಚರ್ಚೆ ಮತ್ತು ವಕ್ತಾರರು” ಎಂದಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ, “ಹಿಂದೂ ಮುಸ್ಲಿಂ ವಿಭಜಕ ವಿಷ ಇನ್ನೆಷ್ಟು ದಿನ ಈ ದೇಶದ ಆತ್ಮವನ್ನು ಕೊಲ್ಲಬಹುದು” ಎಂದು ಪ್ರಶ್ನಿಸಿದ್ದಾರೆ.

“ಸಂಬಿತ್ ಪಾತ್ರಾ ರಾಜೀವ್ ತ್ಯಾಗಿಯವರನ್ನು ದೇಶದ್ರೋಹಿ ಎಂದಿದ್ದಾರೆ. ದೇಶದ್ರೋಹಿಗಳು ಯಾರೆಂದು ನಮಗೆಲ್ಲರಿಗೂ ತಿಳಿದಿದೆ. ಬ್ರಿಟಿಷರ ಮುಂದೆ ಆರೆಸ್ಸೆಸ್ ತಲೆಬಾಗಿತ್ತು. ಅಡ್ವಾಣಿ ಜಿನ್ನಾರನ್ನು ಹೊಗಳಿದ್ದರು ಮತ್ತು ಮೋದಿ ಪಾಕಿಸ್ತಾನಕ್ಕೆ ತೆರಳಿದ್ದರು. ಲಡಾಖ್ ನಲ್ಲಿ ನಮ್ಮ ಭೂಮಿಯನ್ನು ಬಿಜೆಪಿ ಚೀನಾಗೆ ನೀಡಿದೆ. ನೀವೆಲ್ಲರೂ ದೇಶದ್ರೋಹಿಗಳು ಸಂಬಿತ್” ಎಂದು ಕಾಂಗ್ರೆಸ್ ನಾಯಕ ಗೌರವ್ ಪಂಧೀ ಟ್ವೀಟ್ ಮಾಡಿದ್ದಾರೆ.

ಸಂಬಿತ್ ಪಾತ್ರಾ ತ್ಯಾಗಿಯವರ ಧಾರ್ಮಿಕತೆಯನ್ನು ಪ್ರಶ್ನಿಸಿ , ‘ನಕಲಿ ಹಿಂದೂ’ ಎಂದು ಕರೆದ ನಂತರ ಕಾರ್ಯಕ್ರಮ ಮುಗಿದ ಬಳಿಕ ತ್ಯಾಗಿ ಮೃತಪಟ್ಟಿದ್ದಾರೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಆರೋಪಿಸಿದ್ದಾರೆ.

ಗುರುವಾರ ಬೆಳಗ್ಗೆಯಿಂದ ಟ್ವಿಟರ್ ನಲ್ಲಿ ಸಂಬಿತ್ ಪಾತ್ರಾರನ್ನು ಬಂಧಿಸುವಂತೆ ಟ್ವಿಟರ್ ನಲ್ಲಿ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News