ಕೇಂದ್ರೀಯ ವಿವಿಗಳ ಪೈಕಿ ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾಗೆ ಅಗ್ರ ಸ್ಥಾನ

Update: 2020-08-13 12:09 GMT

ಹೊಸದಿಲ್ಲಿ: ಶಿಕ್ಷಣ ಸಚಿವಾಲಯ ಬಿಡುಗಡೆಗೊಳಿಸಿದ ಕೇಂದ್ರೀಯ ವಿಶ್ವವಿದ್ಯಾಲಯಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಪ್ರತಿಷ್ಠಿತ ಜೆಎನ್‍ಯು ಹಾಗೂ ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಗಳನ್ನೂ ಹಿಂದಿಕ್ಕಿ ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ದೇಶದ ಕೇಂದ್ರೀಯ ವಿಶ್ವವಿದ್ಯಾಲಯಗಳ ಪೈಕಿ ಪ್ರಥಮ ಸ್ಥಾನ ಗಳಿಸಿದೆ.

ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ಪ್ರತಿಭಟನೆಯ ಕೇಂದ್ರ ಬಿಂದು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಆಗಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು.

ಒಟ್ಟು 40 ಕೇಂದ್ರೀಯ ವಿಶ್ವವಿದ್ಯಾಲಯಗಳು ಇರುವ ಈ ಪಟ್ಟಿಯಲ್ಲಿ  ನೀಡಲಾದ ಗ್ರೇಡಿಂಗ್ ಹಾಗೂ ಅಂಕಗಳನ್ನು ಗಮನಿಸಿದಾಗ ಜಾಮಿಯಾ ವಿವಿಗೆ  ಶೇ 90ರಷ್ಟು ಅಂಕಗಳು ದೊರಕಿವೆ.

ಎರಡನೇ ಸ್ಥಾನದಲ್ಲಿ ಅರುಣಾಚಲ ಪ್ರದೇಶದ ರಾಜೀವ್ ಗಾಂಧಿ ವಿಶ್ವವಿದ್ಯಾಲಯವಿದ್ದು ಈ ಸಂಸ್ಥೆಗೆ ಶೇ 83ರಷ್ಟು ಅಂಕಗಳು ದೊರಕಿದ್ದರೆ ನಂತರದ ಸ್ಥಾನಗಳನ್ನು ಕ್ರಮವಾಗಿ ಶೇ 82 ಹಾಗೂ ಶೇ 78ರಷ್ಟು ಅಂಕಗಳನ್ನು ಪಡೆದ ಜವಾಹರಲಾಲ್ ನೆಹರೂ ವಿವಿ ಹಾಗೂ ಆಲಿಘರ್ ಮುಸ್ಲಿಂ ವಿವಿ ಪಡೆದಿವೆ.

ಆಯಾಯ ವಿಶ್ವವಿದ್ಯಾಲಯಗಳು, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಈಗ ಶಿಕ್ಷಣ ಸಚಿವಾಲಯ) ಹಾಗೂ ಕೇಂದ್ರ ವಿಶ್ವವಿದ್ಯಾಲಯ ಅನುದಾನ ಆಯೋಗಗಳ ನಡುವೆ ಸಹಿ ಹಾಕಲಾಗುವ ತ್ರಿಪಕ್ಷೀಯ ಒಪ್ಪಂದದ ಆಧಾರದಲ್ಲಿ  ಮೌಲ್ಯಪಾಲನ ನಡೆಸಿ ಈ ರ್ಯಾಂಕಿಂಗ್ ನೀಡಲಾಗುತ್ತದೆ.

ವಿವಿಧ ಕೋರ್ಸುಗಳಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ,  ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯ ಪೈಕಿ ವಿದ್ಯಾರ್ಥಿನಿಯರ ಸಂಖ್ಯೆ, ಶಿಕ್ಷಣದ ಗುಣಮಟ್ಟ, ಶಿಕ್ಷಕ-ವಿದ್ಯಾರ್ಥಿ ಅನುಪಾತ  ಮುಂತಾದ ಮಾನದಂಡಗಳ ಆಧಾರದಲ್ಲಿ ಈ ರ್ಯಾಂಕಿಂಗ್ ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News