ಭಾರೀ ಮಳೆಗೆ ಸಾಕ್ಷಿಯಾದ ದಿಲ್ಲಿ: ಹಲವಾರು ಪ್ರದೇಶಗಳು ಜಲಾವೃತ, ಟ್ರಾಫಿಕ್ ಜಾಮ್

Update: 2020-08-13 16:40 GMT

ಹೊಸದಿಲ್ಲಿ,ಆ.13: ಪ್ರಸಕ್ತ ಮಳೆಗಾಲದ ಅತ್ಯಂತ ಭರ್ಜರಿ ಮಳೆ ಗುರುವಾರ ದಿಲ್ಲಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಸುರಿದಿದ್ದು, ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ ಮತ್ತು ವಾಹನಗಳ ಸಂಚಾರವು ಅಸ್ತವ್ಯಸ್ತಗೊಂಡಿದೆ. ಬುಧವಾರ ರಾತ್ರಿಯೂ ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆಯಾಗಿತ್ತು.

ಆಯಾ ನಗರ ಹವಾಮಾನ ಕೇಂದ್ರದಲ್ಲಿ 99.2 ಮಿ.ಮೀ.ಮಳೆ ದಾಖಲಾಗಿದ್ದು, ಇದು ಪ್ರಸಕ್ತ ಋತುವಿನಲ್ಲಿ ಸುರಿದಿರುವ ಅತ್ಯಂತ ಹೆಚ್ಚಿನ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ.

ನಗರದ ತಗ್ಗು ಪ್ರದೇಶಗಳು ನೀರಿನಲ್ಲಿ ಮುಳುಗಿದ್ದನ್ನು ತೋರಿಸುವ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ತುಘ್ಲಕಾಬಾದ್ ಪ್ರದೇಶದಲ್ಲಿ ಸೇತುವೆಯೊಂದರ ಕೆಳಗೆ ನೆರೆ ನೀರಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಬಸ್‌ವೊಂದನ್ನು ಜೆಸಿಬಿ ನೆರವಿನಿಂದ ಹೊರತೆಗೆಯಲಾಗಿದೆ. ಕೊಡೆಗಳನ್ನು ಹಿಡಿದುಕೊಂಡಿದ್ದ ಜನರು ಚಕ್ಕಡಿ ಗಾಡಿಯ ಮೂಲಕ ನೀರು ತುಂಬಿದ್ದ ರಸ್ತೆಯನ್ನು ದಾಟುತ್ತಿದ್ದ ದೃಶ್ಯವನ್ನು ವೀಡಿಯೊವೊಂದು ತೋರಿಸಿದೆ.

40ಕ್ಕೂ ಅಧಿಕ ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ಎಂಟು ಕಡೆಗಳಲ್ಲಿ ಕಟ್ಟಡಗಳು ಭಾಗಶಃ ಕುಸಿದಿವೆ ಎಂದು ಉತ್ತರ ದಿಲ್ಲಿ ಮಹಾನಗರ ಪಾಲಿಕೆಯು ತಿಳಿಸಿದೆ.

ನಗರದ ಹಲವು ಕಡೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ದಿಲ್ಲಿ ಉಚ್ಚ ನ್ಯಾಯಾಲಯದ ಬಳಿ ಮರವೊಂದು ಉರುಳಿಬಿದ್ದು ವಾಹನಗಳ ಸಂಚಾರಕ್ಕೆ ವ್ಯತ್ಯಯವುಂಟಾಗಿತ್ತು.

ನೆರೆಯ ಗುರುಗ್ರಾಮದಲ್ಲಿಯೂ ಭಾರೀ ಮಳೆಯಾಗಿದ್ದು,ರಸ್ತೆಗಳಲ್ಲಿ ನೆರೆ ನೀರು ತುಂಬಿಕೊಂಡಿತ್ತು.

ಮುಂದಿನ 2-3 ದಿನಗಳ ಕಾಲ ದಿಲ್ಲಿಯಲ್ಲಿ ಲಘು ಮಳೆಯಾಗಲಿದೆ ಎಂದು ಐಎಂಡಿಯ ಪ್ರಾದೇಶಿಕ ಮುನ್ಸೂಚನೆ ಕೇಂದ್ರದ ಮುಖ್ಯಸ್ಥ ಕುಲದೀಪ ಶ್ರೀವಾಸ್ತವ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News