ಸೆ.16ರಿಂದ ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆ ಆರಂಭ: ಕುಲಪತಿ

Update: 2020-08-13 17:35 GMT

ಮಂಗಳೂರು, ಆ.13: ರಾಜ್ಯ ಸರಕಾರ ಮತ್ತು ಯುಜಿಸಿ ನಿರ್ದೇಶನದ ಮೇರೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಮತ್ತು ಸ್ನಾತಕೋತ್ತರ ಪದವಿಯ 2019-20ನೇ ಸಾಲಿನ ಅಂತಿಮ ಸೆಮಿಸ್ಟರ್‌ಗಳ ಪರೀಕ್ಷೆಯನ್ನು ಸೆ.16ರಿಂದ 30ರೊಳಗೆ ನಡೆಸಲಾಗುವುದು ಎಂದು ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಪ್ರಕಟಿಸಿದ್ದಾರೆ.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ಇದ್ದರೂ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪದವಿ, ಸ್ನಾತಕೋತ್ತರ ಪದವಿಯ ಕೊನೆಯ ಸೆಮಿಸ್ಟರ್ ಪರೀಕ್ಷೆಗಳು ಮಾತ್ರ ಈ ಬಾರಿ ನಡೆಯಲಿವೆ. ಉಳಿದ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ವಿವಿಧ ಮಾನದಂಡಗಳ ಆಧಾರದಲ್ಲಿ ಅಂಕ ನೀಡಿ, ಪರೀಕ್ಷೆ ಇಲ್ಲದೆ ಮುಂದಿನ ಸೆಮಿಸ್ಟರ್‌ಗೆ ಮುಂಬಡ್ತಿ ನೀಡಲಾಗುವುದು ಎಂದು ಹೇಳಿದರು.

ವಿವಿಯ ಅಂತಿಮ ಸೆಮಿಸ್ಟರ್‌ನ ವಿದ್ಯಾರ್ಥಿಗಳು ಮಾತ್ರವಲ್ಲ, ಪದವಿ ಮುಗಿಸಿ ವಿವಿಧ ಸೆಮಿಸ್ಟರ್‌ಗಳ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೂ ಅಂತಹ ಹಿಂಬಾಕಿ ಕೋರ್ಸ್ ಅಥವಾ ಪತ್ರಿಕೆಗಳ ಪರೀಕ್ಷೆಗೆ ಹಾಜರಾಗಲು ಅವಕಾಶವಿದೆ. ಈ ಹಿಂಬಾಕಿ ಪರೀಕ್ಷೆಗಳೂ ಇದೇ ಅವಧಿಯಲ್ಲಿ ನಡೆಯಲಿವೆ. ಇದುವರೆಗೂ ಶುಲ್ಕ ಪಾವತಿ ಮಾಡದ ಮತ್ತು ಪರೀಕ್ಷಾ ನೋಂದಣಿಯನ್ನೂ ಮಾಡದ ವಿದ್ಯಾರ್ಥಿಗಳು ಆ.17ರೊಳಗೆ ಸಂಬಂಧಿತ ಕಾಲೇಜು ಪ್ರಾಂಶುಪಾಲರಿಗೆ ಮನವಿ ಸಲ್ಲಿಸಬೇಕು ಎಂದು ಪ್ರೊ.ಯಡಪಡಿತ್ತಾಯ ತಿಳಿಸಿದರು.

ಅಂತಿಮ ಸೆಮಿಸ್ಟರ್ ಹೊರತುಪಡಿಸಿ ಇಂಟರ್‌ಮಿಡಿಯೇಟ್ ಸೆಮಿಸ್ಟರ್‌ಗಳ (ಉದಾ- 2, 4ನೇ ಸೆಮಿಸ್ಟರ್) ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ನಿಗದಿತ ಮಾನದಂಡಗಳ ಆಧಾರದಲ್ಲಿ ಮುಂದಿನ ಸೆಮಿಸ್ಟರ್‌ಗೆ ಮುಂಬಡ್ತಿ ನೀಡಲಾಗುತ್ತದೆ. ಅವರ ನಿಕಟಪೂರ್ವ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶದ ಶೇ.50 ಅಂಕ ಹಾಗೂ ಪ್ರಸ್ತುತ ಸೆಮಿಸ್ಟರ್‌ನ ಆಂತರಿಕ ಪರೀಕ್ಷೆಯ ಶೇ.50ರಷ್ಟು ಅಂಕಗಳನ್ನು ಸೇರಿಸಿ ಅಂಕ ನಿಗದಿಗೊಳಿಸ ಲಾಗುತ್ತದೆ. ಈ ಅಂಕದ ಲೆಕ್ಕಾಚಾರ ಒಪ್ಪಿಗೆಯಾಗದ ವಿದ್ಯಾರ್ಥಿಗಳು ಅಂಕಪಟ್ಟಿ ದೊರೆತ 15 ದಿನದೊಳಗೆ ಫಲಿತಾಂಶವನ್ನು ತಿರಸ್ಕರಿಸಿ ಮುಂಬರುವ ಶೈಕ್ಷಣಿಕ ವರ್ಷಗಳಲ್ಲಿ ನಡೆಸಲ್ಪಡುವ ಆಯಾ ಸೆಮಿಸ್ಟರ್ ಪರೀಕ್ಷೆ ಬರೆಯಲು ಕೂಡ ಅವಕಾಶವಿದೆ ಎಂದು ಕುಲಪತಿ ವಿವರಿಸಿದರು.

ವಿವಿ ಆವರಣದಲ್ಲಿರುವ ಹಾಸ್ಟೆಲ್‌ನ್ನು ಸದ್ಯಕ್ಕೆ ಕೊರೋನ ಆರೈಕೆ ಕೇಂದ್ರವಾಗಿ ಪರಿವರ್ತಿಸಲಾಗಿದೆ. ಕೋವಿಡ್-19 ಮಾರ್ಗಸೂಚಿಯಂತೆ ಹೊರ ಜಿಲ್ಲೆಗಳ ವಿದ್ಯಾರ್ಥಿಗಳು 14 ದಿನಗಳ ಮೊದಲೇ ಆಗಮಿಸಿ ಹಾಸ್ಟೆಲ್‌ಗಳಲ್ಲಿ ಉಳಿದುಕೊಳ್ಳಬೇಕಾಗಿರುವುದರಿಂದ ಈಗಾಗಲೇ ಕೊರೋನ ಆರೈಕೆ ಕೇಂದ್ರವಾಗಿ ಪರಿವರ್ತನೆ ಮಾಡಿರುವ ಹಾಸ್ಟೆಲ್ ಬಿಟ್ಟುಕೊಡಲು ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ ನಡೆಸಲಾಗಿದೆ ಎಂದರು.

ಪರೀಕ್ಷೆ ಬರೆಯುವ ಯಾವುದೇ ವಿದ್ಯಾರ್ಥಿಗೆ ಕೊರೋನ ಪಾಸಿಟಿವ್ ಇದ್ದರೆ ಸಕಲ ಸುರಕ್ಷಾ ಕ್ರಮಗಳೊಂದಿಗೆ ಅವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ. ಈ ಬಾರಿ ವಿವಿ ಅಧೀನದ ಎಲ್ಲ ಕಾಲೇಜುಗಳನ್ನೂ ಪರೀಕ್ಷೆ ಕೇಂದ್ರಗಳನ್ನಾಗಿ ಮಾರ್ಪಡಿಸಲಾಗುವುದು ಎಂದು ಹೇಳಿದರು.

ಡಿಜಿಟಲ್ ಮೌಲ್ಯಮಾಪನ: ಈ ಬಾರಿ ಡಿಜಿಟಲ್ ವೌಲ್ಯಮಾಪನ ನಡೆಸಲು ಯೋಜಿಸಲಾಗಿದ್ದು, ಇದರಿಂದ ನಿಖರವಾಗಿ, ಅತಿಶೀಘ್ರ ಮೌಲ್ಯಮಾಪನ ಸಾಧ್ಯವಾಗಲಿದೆ. ಅದಕ್ಕಾಗಿ ಉಡುಪಿ, ಕೊಡಗು, ದ.ಕ. ಜಿಲ್ಲೆಯಲ್ಲಿ ತಲಾ ನಾಲ್ಕು ಕಾಲೇಜುಗಳನ್ನು ಗುರುತಿಸಲಾಗಿದೆ ಎಂದು ಪ್ರೊ. ಯಡಪಡಿತ್ತಾಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್. ಧರ್ಮ, ವಿವಿ ಕಾಲೇಜು ಪ್ರಾಂಶಪಾಲ ಡಾ.ಉದಯಕುಮಾರ್ ಉಪಸ್ಥಿತರಿದ್ದರು.

ಹೊರರಾಜ್ಯದಲ್ಲೇ ಪರೀಕ್ಷೆ

ಭೂತಾನ್, ಮೇಘಾಲಯ, ಮಣಿಪುರ ಸೇರಿದಂತೆ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಇಲ್ಲಿಗೆ ಆಗಮಿಸಲು ಅನನುಕೂಲ ವಾಗುವ ಹಿನ್ನೆಲೆಯಲ್ಲಿ ಅವರವರ ರಾಜ್ಯಗಳಲ್ಲೇ ಅಲ್ಲಿನ ವಿವಿಗಳೊಂದಿಗೆ ಒಡಂಬಡಿಕೆ ಮಾಡಿ ಪರೀಕ್ಷೆ ನಡೆಸಲು ಯೋಜಿಸಲಾಗಿದೆ ಎಂದು ಕುಲಪತಿ ಪ್ರೊ.ಯಡಪಡಿತ್ತಾಯ ತಿಳಿಸಿದ್ದಾರೆ.

ಈಗಾಗಲೇ ಭೂತಾನ್ ಮತ್ತು ಮಣಿಪುರ ವಿವಿಗಳು ಇದಕ್ಕೆ ಒಪ್ಪಿಕೊಂಡಿವೆ. ಇನ್ನು ಕೇರಳ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಅಲ್ಲೇ ಪರೀಕ್ಷೆ ನಡೆಸಲು ಕಣ್ಣೂರು ಮತ್ತು ಸೆಂಟ್ರಲ್ ವಿವಿ ಜತೆ ಮಾತುಕತೆ ನಡೆಸಲಾಗುತ್ತಿದೆ. ಇಲ್ಲಿ ಪರೀಕ್ಷೆ ನಡೆಯುವ ಸಮಯದಲ್ಲೇ ಏಕಕಾಲದಲ್ಲಿ ಅಲ್ಲೂ ಪರೀಕ್ಷೆ ನಡೆಯಲಿದೆ. ಒಂದು ವೇಳೆ ಈ ವ್ಯವಸ್ಥೆಯಡಿ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮಂದಿನ ದಿನಗಳಲ್ಲಿ ವಿಶೇಷ ಪರೀಕ್ಷೆ ನಡೆಸಲಾಗುವುದು ಎಂದು ಪ್ರೊ.ಯಡಪಡಿತ್ತಾಯ ಮಾಹಿತಿ ನೀಡಿದರು.

ಶುಲ್ಕ ಇಲ್ಲದೆಯೂ ಪರೀಕ್ಷೆಗೆ ಅವಕಾಶ

ಪರೀಕ್ಷಾ ಶುಲ್ಕ ಶೇ.10ರಷ್ಟು ಏರಿಸುವ ಅವಕಾಶವಿದ್ದರೂ ಈ ಬಾರಿ ಶುಲ್ಕ ಏರಿಕೆ ಮಾಡಿಲ್ಲ. ಕೊರೋನ ಕಾರಣದಿಂದ ಆರ್ಥಿಕ ದುಃಸ್ಥಿತಿಯಿಂದ ಪರೀಕ್ಷಾ ಶುಲ್ಕ ಕಟ್ಟಲು ಸಾಧ್ಯವಾಗದಿದ್ದರೂ ಪರೀಕ್ಷೆ ಬರೆಯಲು ಅವಕಾಶವಿದೆ. ಅಂತಹ ವಿದ್ಯಾರ್ಥಿಗಳು ಪರೀಕ್ಷೆ ಮುಗಿದು ಅಂಕಪಟ್ಟಿ ಪಡೆಯುವಾಗ ಶುಲ್ಕ ಕಟ್ಟಿದರೂ ಸಾಕು. ಆದರೆ ಪರೀಕ್ಷೆಗೆ ಹಾಜರಾಗಬೇಕಾದರೆ ಆಯಾ ಸೆಮಿಸ್ಟರ್‌ನಲ್ಲಿ ಕನಿಷ್ಠ ಹಾಜರಾತಿ ಅಗತ್ಯ ಎಂದು ಕುಲಪತಿ ಪ್ರೊ.ಯಡಪಡಿತ್ತಾಯ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News