ಸ್ವಾತಂತ್ರ್ಯೋತ್ಸವಕ್ಕೂ ಅಡ್ಡಿಯಾದ ಕೊರೋನ : ಶಾಲಾ ಕಾಲೇಜುಗಳಲ್ಲಿಲ್ಲ ಈ ಬಾರಿ ವಿದ್ಯಾರ್ಥಿಗಳ ಕಲರವ

Update: 2020-08-14 10:13 GMT

ಮಂಗಳೂರು, ಆ.14: ಪ್ರತಿ ವರ್ಷ ಶಾಲಾ ಕಾಲೇಜುಗಳ ಶೈಕ್ಷಣಿಕ ವರ್ಷ ಆರಂಭವಾಗಿ ಎರಡೂವರೆ ತಿಂಗಳಲ್ಲಿ ಆಚರಿಸಲ್ಪಡುವ ಸ್ವಾತಂತ್ರ್ಯೋತ್ಸವ ಬಹು ಪ್ರಾಮುಖ್ಯ ಹಾಗೂ ವಿದ್ಯಾರ್ಥಿಗಳ ಸಡಗರದ ಆಚರಣೆ. ರಾಷ್ಟ್ರೀಯ ಹಬ್ಬವಾದ ಸ್ವಾತಂತ್ರ್ಯೋತ್ಸವದ ದಿನ ಶಾಲಾ ಕಾಲೇಜುಗಳ ಮಕ್ಕಳು ಹೊಸ ಸಮವಸ್ತ್ರ, ಕೈಯ್ಯಲ್ಲಿ ರಾಷ್ಟ್ರ ಧ್ವಜ ಹಿಡಿದು ಉಲ್ಲಾಸದಿಂದ ಸಂಭ್ರಮಾಚರಣೆಗೆ ತೆರಳುತ್ತಾರೆ. ಆದರೆ ಈ ಬಾರಿ ಕೊರೋನ ಸೋಂಕು ವಿದ್ಯಾರ್ಥಿಗಳ ಈ ಸ್ವಾಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೂ ಅಡ್ಡಿಯಾಗಿದೆ.

ಶಾಲಾ ಕಾಲೇಜುಗಳ ಆರಂಭಿಸುವ ಕುರಿತಂತೆ ಸರಕಾರದಿಂದ ಇನ್ನೂ ಯಾವುದೇ ನಿರ್ಧಾರವಾಗದ ಕಾರಣ ಈ ಬಾರಿಯ ಸ್ವಾತಂತ್ರ್ಯೋತ್ಸವ ಸಂಭ್ರಮ ವಿದ್ಯಾರ್ಥಿಗಳ ಸಂಭ್ರಮ, ಸಡಗರ ಕಾಣಸಿಗದು. ಶಾಲಾ ಕಾಲೇಜುಗಳಲ್ಲಿ ಆಚರಿಸಲಾಗುವ ಸರಳ ಸ್ವಾತಂತ್ರ್ಯೋತ್ಸವದಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ಅವಕಾಶವಿರದು.

ಸ್ವಾತಂತ್ರ್ಯೋತ್ಸವ ಸಂಭ್ರಮದ ಇತಿಹಾಸದಲ್ಲಿಯೇ ಈ ರೀತಿಯ ವಾತಾವರಣ ಪ್ರಥಮ ಬಾರಿಯದ್ದಾಗಿದೆ. ವಿದ್ಯಾರ್ಥಿಗಳ ಅನುಪಸ್ಥಿತಿಯಲ್ಲಿ ಈ ಬಾರಿ ಶಾಲಾ ಕಾಲೇಜುಗಳಲ್ಲಿ ಸ್ವಾತಂತ್ರ್ಯೋತ್ಸವ ನಡೆಯಲಿದೆ. ಪ್ರಾಕೃತಿಕ ವಿಕೋಪ, ಪ್ರವಾಹ ಸೇರಿದಂತೆ ತುರ್ತು ಪರಿಸ್ಥಿತಿಯ ಸಂದರ್ಭ ದಲ್ಲೂ ಶಾಲಾ ಕಾಲೇಜುಗಳಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿಯೇ ಸರಳವಾಗಿ ಆಚರಿಸಲಾಗುತ್ತದೆ. ಉಳಿದಂತೆ ಸ್ವಾತಂತ್ರ್ಯೋತ್ಸವ ದಿನ ಅತಿಥಿಗಳು, ಮಕ್ಕಳು ಹಾಗೂ ಶಿಕ್ಷಕರು ಸೇರಿ ಸಂಭ್ರಮದಿಂದ ಆಚರಿಸಲ್ಪಡುತ್ತದೆ. ದೇಶ ಭಕ್ತಿಯ ಗೀತೆ ಗಳು, ದೇಶದ ಸ್ವಾತಂತ್ರ ಹೋರಾಟಗಾರರ ಬಗ್ಗೆ ಹಿತನುಡಿಗಳು, ಮಕ್ಕಳಿಂದ ಛದ್ಮವೇಷ, ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಸೇರಿದಂತೆ ನಾನಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡಾ ಶಾಲಾ ಕಾಲೇಜುಗಳಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಹಮ್ಮಿಕೊಳ್ಳ ಲಾಗುತ್ತದೆ. ಆದರೆ ಈ ಬಾರಿ ಅವೆಲ್ಲವನ್ನೂ ಕೋವಿಡ್ 19 ಹಿನ್ನೆಲೆಯಲ್ಲಿ ನಿರ್ಬಂಧಿಸಲಾಗಿದೆ. ಕೇವಲ ಶಾಲಾ ಆಡಳಿತ ಮಂಡಳಿ, ಶಿಕ್ಷಕರ ಉಪಸ್ಥಿತಿಯಲ್ಲಿ ಸರಳ ಧ್ವಜಾರೋಹಣದ ಮೂಲಕ ಸ್ವಾತಂತ್ರ್ಯೋತ್ಸವ ನಡೆಯಲಿದೆ.

‘‘ಕೋವಿಡ್ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಾದ್ಯಂತ ಶಾಲೆಗಳಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಗುತ್ತದೆ. ಶಾಲಾ ಶಿಕ್ಷಕರು ಮಾತ್ರವೇ ಇದರಲ್ಲಿ ಪಾಲ್ಗೊಳ್ಳಲಿದ್ದು, ಮಕ್ಕಳು ಭಾಗವಹಿಸಲು ಅವಕಾಶವಿರುವುದಿಲ್ಲ. ಯಾವುದೇ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ಎಲ್ಲಾ ಶಾಲೆಗಳಲ್ಲಿ ಸರಳವಾಗಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನಡೆಯಲಿದೆ’’

- ಮಲ್ಲೇಸ್ವಾಮಿ, ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ದ.ಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News