ಸಿಎಎ:ಭಿನ್ನಾಭಿಪ್ರಾಯದ ಅಪರಾಧೀಕರಣ ನಿಲ್ಲಿಸಲು ಮತ್ತು ಪ್ರತಿಭಟನಾಕಾರರ ಬಿಡುಗಡೆಗೆ ಆಮ್ನೆಸ್ಟಿ ಆಗ್ರಹ

Update: 2020-08-14 14:23 GMT

ಹೊಸದಿಲ್ಲಿ,ಆ.14: ಭಿನ್ನಾಭಿಪ್ರಾಯಗಳ ಅಪರಾಧೀಕರಣವನ್ನು ನಿಲ್ಲಿಸುವಂತೆ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದಕ್ಕಾಗಿ ಬಂಧಿತರಾಗಿರುವ ಎಲ್ಲ ಯುವಜನರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ (ಎಐಐ) ಶುಕ್ರವಾರ ಕೇಂದ್ರವನ್ನು ಆಗ್ರಹಿಸಿದೆ. ಸಿಎಎ ‘ಧರ್ಮಾಂಧ ’ಕಾನೂನು ಆಗಿದೆ ಮತ್ತು ಧರ್ಮದ ಆಧಾರದಲ್ಲಿ ತಾರತಮ್ಯವನ್ನು ಮಾಡುತ್ತದೆ ಹಾಗೂ ವಿಶೇಷವಾಗಿ ಮುಸ್ಲಿಮರನ್ನು ಹೊರಗಿರಿಸುವ ಉದ್ದೇಶವನ್ನು ಹೊಂದಿದೆ ಎಂದು ಎಐಐ ತನ್ನ ‘ಭಿನ್ನಾಭಿಪ್ರಾಯದ ಹಕ್ಕು ’ ಅಭಿಯಾನಕ್ಕೆ ಚಾಲನೆ ನೀಡಿದ ಸಂದರ್ಭ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.

 ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಸಮುದಾಯವಾಗಿರುವ ದೇಶದ ಯುವಜನರ ಧ್ವನಿಗಳಿಗೆ ಕಿವಿಯಾಗುವ ಬದಲು ಸರಕಾರವು ಭಿನ್ನಾಭಿಪ್ರಾಯಗಳ ವಿರುದ್ಧ ಕ್ರೂರ ದಾಳಿಗಳನ್ನು ನಡೆಸುವ ಮೂಲಕ ಅವರನ್ನು ದಮನಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿರುವ ಎಐಐ,ದಿಲ್ಲಿಯ ಜೈಲುಗಳಲ್ಲಿ ಕನಿಷ್ಠ ಐವರು ವಿದ್ಯಾರ್ಥಿಗಳು ಮತ್ತು ದೇಶಾದ್ಯಂತ ಇತರ ಹಲವಾರು ಜನರು ಈಗಲೂ ಬಂಧನದಲ್ಲಿರುವುದನ್ನು ಬೆಟ್ಟು ಮಾಡಿದೆ. ಹಲವರನ್ನು ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿದೆ,ಇನ್ನು ಹಲವರ ವಿರುದ್ಧ ಕೊಲೆ,ಕೊಲೆ ಯತ್ನ ಮತ್ತು ಲೂಟಿಯ ಆರೋಪ ಹೊರಿಸಿ ದಿಲ್ಲಿ ಪೊಲೀಸರು ನೋಟಿಸ್‌ಗಳನ್ನು ಹೊರಡಿಸಿದ್ದಾರೆ ಎಂದಿರುವ ಹೇಳಿಕೆಯು,ಈ ಪೈಕಿ ಹಲವರನ್ನು ಕೋವಿಡ್ ಬಿಕ್ಕಟ್ಟಿನ ನಡುವೆಯೂ ವಿಚಾರಣೆಗೆ ಕರೆಸಲಾಗಿತ್ತು ಎಂದು ಒತ್ತಿ ಹೇಳಿದೆ.

 ಕರಾಳ ದೇಶದ್ರೋಹ ಕಾನೂನುಗಳು ಮತ್ತು ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ವಿದ್ಯಾರ್ಥಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದಿರುವ ಹೇಳಿಕೆಯು,ಸರಕಾರವು ತನ್ನನ್ನು ಟೀಕಿಸುವವರಿಗೆ ಕಿರುಕುಳ ನೀಡಲು,ಬೆದರಿಕೆಯೊಡ್ಡಲು ಮತ್ತು ಜೈಲಿಗಟ್ಟಲು ಆಗಾಗ್ಗೆ ಯುಎಪಿಎಯನ್ನು ದುರುಪಯೋಗಿಸುತ್ತಿದೆ. ನಿಧಾನ ತನಿಖೆ ಮತ್ತು ಕಠಿಣ ಜಾಮೀನು ನಿಬಂಧನೆಗಳಿಂದಾಗಿ ಈ ಕಾಯ್ದೆಯಡಿ ಬಂಧಿತರು ವಿಚಾರಣೆಯಿಲ್ಲದೆ ವರ್ಷಗಳ ಕಾಲ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ ಎಂದಿದೆ.

 ಡಿಸೆಂಬರ್ 2019ರಿಂದೀಚಿಗೆ ದೇಶಾದ್ಯಂತ ಪೊಲೀಸರು ಕಾಲೇಜು ಕ್ಯಾಂಪಸ್‌ಗಳಿಗೆ ನುಗ್ಗಿ ವಿದ್ಯಾರ್ಥಿಗಳ ವಿರುದ್ಧ ಹಿಂಸಾಚಾರ ನಡೆಸಿರುವ ಹಲವಾರು ಘಟನೆಗಳನ್ನು ಹೇಳಿಕೆಯಲ್ಲಿ ಉಲ್ಲೇಖಿಸಿರುವ ಎಐಐ ಕಾರ್ಯಕಾರಿ ನಿರ್ದೇಶಕ ಅವಿನಾಶ ಕುಮಾರ್ ಅವರು,ಮುಸ್ಲಿಂ ವಿದ್ಯಾರ್ಥಿಗಳು ಹೆಚ್ಚಿರುವ ಅಥವಾ ಭಿನ್ನಾಭಿಪ್ರಾಯಗಳಿಗೆ ಉತ್ತೇಜನ ದೊರೆಯುವ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ,ಅಲಿಘಡ ಮುಸ್ಲಿಂ ವಿವಿ,ಜೆಎನ್‌ಯುನಂತಹ ಕ್ಯಾಂಪಸ್‌ಗಳಲ್ಲಿ ಪೊಲೀಸರು ವಿಶೇಷ ದೌರ್ಜನ್ಯವನ್ನು ಮೆರೆದಿದ್ದಾರೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News