ಕೊರೋನ ನಡುವೆ ಸ್ವಾತಂತ್ರ್ಯ ದಿನಾಚರಣೆ: ಕೆಂಪು ಕೋಟೆಯಲ್ಲಿ 6 ಅಡಿ ಅಂತರದಲ್ಲಿ ಆಸನ, ವಿಶೇಷ ನಿಯಮ ಜಾರಿ

Update: 2020-08-14 15:17 GMT

ಹೊಸದಿಲ್ಲಿ, ಆ.14: ಕೊರೋನ ಪಿಡುಗಿನ ಹಿನ್ನೆಲೆಯಲ್ಲಿ ಸರಕಾರ ಕೆಂಪು ಕೋಟೆಯಲ್ಲಿ ಮುನ್ನೆಚ್ಚರಿಕೆಯೊಂದಿಗೆ 74ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ಆಯೋಜಿಸಿದೆ.

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಬಹುಪದರದ ಭದ್ರತಾ ವ್ಯವಸ್ಥೆ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳಲಿದೆ. ಆಸನಗಳ ನಡುವೆ 6 ಅಡಿಗಳ ಅಂತರ ಹಾಗೂ ಮಾಸ್ಕ್ ಧರಿಸುವುದು ಇದರಲ್ಲಿ ಒಳಗೊಳ್ಳಲಿದೆ. ಕೊರೋನ ಪಿಡುಗಿನ ಹಿನ್ನೆಲೆಯಲ್ಲಿ ಯಾವುದೇ ಜನ ನಿಬಿಡತೆ ಉಂಟಾಗದಂತೆ ಆಸನಗಳ ಆವರಣ ಹಾಗೂ ಕಾಲು ದಾರಿಗೆ ಮರದ ನೆಲಹಾಸು ಹಾಗೂ ಕಾರ್ಪೆಟ್‌ಗಳನ್ನು ಹಾಕಲಾಗಿದೆ. ಹೆಚ್ಚಿನ ಪಾರ್ಕಿಂಗ್ ಪ್ರದೇಶಗಳಲ್ಲಿ ಇಟ್ಟಿಗೆಗಳನ್ನು ಇರಿಸಲಾಗಿದೆ. ಅಲ್ಲದೆ, ವಾಹನಗಳಿಗೆ ಸುಲಭವಾಗಿ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶ ಮಾಡಿ ಕೊಡಲಾಗುತ್ತದೆ. ಗೌರವ ರಕ್ಷೆ ಸ್ವೀಕರಿಸುವ ಸದಸ್ಯರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಆಹ್ವಾನ ಇರುವವರು ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಧಿಕಾರಿಗಳು, ರಾಜತಾಂತ್ರಿಕರು, ಮಾಧ್ಯಮ ಹಾಗೂ ಇತರರು ಸೇರಿದಂತೆ 4000ಕ್ಕೂ ಅಧಿಕ ಮಂದಿಗೆ ಆಹ್ವಾನ ನೀಡಲಾಗಿದೆ. ಸುರಕ್ಷೆಯ ದೃಷ್ಟಿಯಿಂದ ಶಾಲಾ ಮಕ್ಕಳ ಬದಲು ಎನ್‌ಸಿಸಿ ಕೆಡೆಟ್‌ಗಳನ್ನು ಆಹ್ವಾನಿಸಲಾಗಿದೆ. ಅವರಿಗೆ ಜ್ಞಾನಪಥದಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಆಹ್ವಾನ ಪತ್ರಿಕೆಯಲ್ಲಿ ಕೊರೋನಕ್ಕೆ ಸಂಬಂಧಿಸಿ ವಿವರವಾದ ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗಿದೆ. ಪ್ರವೇಶದ ಸಂದರ್ಭ ಕೊರೋನ ಲಕ್ಷಣ ಕಂಡು ಬಂದರೆ ಅಂತವರ ನಿರ್ವಹಣೆಗೆ ನಾಲ್ಕು ಸ್ಥಳಗಳಲ್ಲಿ ವೈದ್ಯಕೀಯ ಬೂತ್‌ಗಳನ್ನು ಸ್ಥಾಪಿಸಲಾಗಿದೆ. ಆ್ಯಂಬುಲೆನ್ಸ್‌ಗಳನ್ನು ಸಿದ್ಧವಾಗಿ ಇರಿಸಲಾಗಿದೆ. ಎಲ್ಲ ಪ್ರವೇಶ ದ್ವಾರಗಳಿಗೆ ಆಹ್ವಾನಿತರಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುತ್ತದೆ.

ಕೆಂಪು ಕೋಟೆಯ ಹೊರಗೆ ಹಾಗೂ ಒಳಗೆ ಸ್ಯಾನಿಟೈಸೇಶನ್ ನಡೆಸಲಾಗಿದೆ. ಎಲ್ಲ ಆಹ್ವಾನಿತರು ಮಾಸ್ಕ್ ಧರಿಸುವಂತೆ ವಿನಂತಿಸಲಾಗುವುದು. ವಿವಿಧ ಸ್ಥಳಗಲ್ಲಿ ಮಾಸ್ಕ್‌ಗಳನ್ನು ವಿತರಿಸಲು ವ್ಯವಸ್ಥೆ ಮಾಡಲಾಗುವುದು ಅದೇ ರೀತಿ ಎಲ್ಲ ಸ್ಥಳಗಳಲ್ಲಿ ಸ್ಯಾನಿಟೈಸರ್ ಲಭ್ಯವಾಗುವಂತೆ ಮಾಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News