ಮೇ-ಜೂನ್‌ನಲ್ಲಿ ಎಲ್‌ಎಸಿಯಲ್ಲಿ ಭಾರತ-ಚೀನಾ ನಡುವೆ ಜನರಿಗೆ ಗೊತ್ತಿರುವುದಕ್ಕಿಂತ ಹೆಚ್ಚು ಘರ್ಷಣೆಗಳು ನಡೆದಿದ್ದವು:ವರದಿ

Update: 2020-08-14 16:13 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಆ.14: ಈ ವರ್ಷದ ಮೇ ಮತ್ತು ಜೂನ್ ತಿಂಗಳುಗಳಲ್ಲಿ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಭಾರತ ಮತ್ತು ಚೀನಾ ನಡುವೆ ಸಾರ್ವಜನಿಕರಿಗೆ ಗೊತ್ತಿರುವುದಕ್ಕಿಂತ ಹೆಚ್ಚಿನ ದೈಹಿಕ ಘರ್ಷಣೆಗಳು ಸಂಭವಿಸಿದ್ದವು,ಕೆಲವು ಘರ್ಷಣೆಗಳು ರಾತ್ರಿಯಿಡೀ ನಡೆದಿದ್ದವು. ಈ ಘರ್ಷಣೆಗಳಲ್ಲಿ ಉಭಯ ಸೇನೆಗಳ ಹಲವರು ಗಾಯಗೊಂಡಿದ್ದರು ಎಂದು ಸುದ್ದಿ ಜಾಲತಾಣ ‘The print’ ವರದಿ ಮಾಡಿದೆ.

 ಎಲ್‌ಎಸಿ ರಕ್ಷಣೆಯ ಹೊಣೆಯನ್ನು ಹೊತ್ತಿರುವ ಐಟಿಬಿಪಿ ಪೊಲೀಸ್ ಶೌರ್ಯ ಪದಕಕ್ಕಾಗಿ ತನ್ನ 21 ಸಿಬ್ಬಂದಿಗಳ ಹೆಸರುಗಳನ್ನು ಶಿಫಾರಸು ಮಾಡಿರುವ ಸಂದರ್ಭದಲ್ಲಿಯೇ ಈ ಹೊಸ ಮಾಹಿತಿ ಲಭಿಸಿದೆ.

ಮೇ 5ರಂದು ಪ್ಯಾಂಗಾಂಗ್ ತ್ಸೋ,ಮೇ 9ರಂದು ಸಿಕ್ಕಿಂ ಮತ್ತು ಜೂ.15ರಂದು ಗಲ್ವಾನ್ ಕಣಿವೆಯಲ್ಲಿ ಈ ಘರ್ಷಣೆಗಳು ನಡೆದಿದ್ದವು ಎಂದು ರಕ್ಷಣಾ ಮತ್ತು ಭದ್ರತಾ ಸಂಸ್ಥೆಯಲ್ಲಿನ ಮೂಲಗಳು ತಿಳಿಸಿವೆ,ಆದರೆ ಸೇನೆ ಮತ್ತು ಐಟಿಬಿಪಿ ಈ ಬಗ್ಗೆ ತುಟಿಪಿಟಕ್ಕೆಂದಿಲ್ಲ.

ಸೇನೆ ಮತ್ತು ಐಟಿಬಿಪಿ ಸಿಬ್ಬಂದಿಗಳು ಭಾಗಿಯಾಗಿದ್ದ ಹಲವಾರು ಘರ್ಷಣೆಗಳು ನಡೆದಿದ್ದವು. ಕೆಲವೊಮ್ಮೆ ಚೀನಿಯರ ಸಂಖ್ಯೆ ಹೆಚ್ಚಿದ್ದರೆ,ಕೆಲವೊಮ್ಮೆ ನಮ್ಮವರ ಸಂಖ್ಯೆ ಹೆಚ್ಚಿತ್ತು ಎಂದು ಈ ಮೂಲಗಳು ತಿಳಿಸಿವೆ.

 ತನ್ಮಧ್ಯೆ,2020 ಮೇ-ಜೂನ್ ಅವಧಿಯಲ್ಲಿ ‘ಬಿಕ್ಕಟ್ಟು ಮತ್ತು ಘರ್ಷಣೆಗಳಿಗೆ’ ಸಂಬಂಧಿಸಿದಂತೆ ತನ್ನ 21 ಸಿಬ್ಬಂದಿಗಳನ್ನು ಶೌರ್ಯ ಪದಕಗಳಿಗೆ ಶಿಫಾರಸು ಮಾಡಿರುವುದಾಗಿ ಐಟಿಬಿಪಿ ತಿಳಿಸಿದೆ. ಸ್ವಾತಂತ್ರ್ಯೋತ್ಸವ ದಿನಕ್ಕೆ ಮುನ್ನ ಕನಿಷ್ಠ 294 ಐಟಿಬಿಪಿ ಸಿಬ್ಬಂದಿಗಳಿಗೆ ಈಗಾಗಲೇ ಮಹಾ ನಿರ್ದೇಶಕರ ಪ್ರಶಂಸಾ ಪತ್ರಗಳನ್ನು ಪ್ರದಾನಿಸಲಾಗಿದ್ದು,ಈ ಎಲ್ಲ ಘಟನೆಗಳು ಚೀನಾಕ್ಕೆ ಸಂಬಂಧಿಸಿದ್ದವು. ಮೇ 5ರಂದು ಪ್ಯಾಂಗಾಂಗ್ ತ್ಸೋನಲ್ಲಿ ನಡೆದಿದ್ದ ಘರ್ಷಣೆಗಳಲ್ಲಿ ಹಲವಾರು ಭಾರತೀಯ ಸೇನಾ ಸಿಬ್ಬಂದಿಗಳು ಗಾಯಗೊಂಡಿದ್ದರು. ಐಟಿಬಿಪಿ ಸಿಬ್ಬಂದಿಗಳು ಇಡೀ ರಾತ್ರಿ ಕಾದಾಡಿದ್ದ ಸಂದರ್ಭಗಳಲ್ಲಿಯೂ ಅವರಿಗೆ ಕನಿಷ್ಠ ಗಾಯಗಳುಂಟಾಗಿದ್ದವು ಮತ್ತು ಚೀನಿ ಸೇನೆಯ ಕಲ್ಲು ತೂರಾಟಗಾರರಿಗೆ ತಕ್ಕ ಉತ್ತರವನ್ನು ನೀಡಿದ್ದರು ಎಂದು ಪಡೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News