ಸಂಕಷ್ಕಕರ ಸಮಯದಲ್ಲಿ ಎಲ್ಲರೂ ಒಂದಾಗಬೇಕಿದೆ: ಕಂದಾಯ ಸಚಿವ ಚಂದ್ರಶೇಖರನ್

Update: 2020-08-15 06:05 GMT

ಕಾಸರಗೋಡಿನಲ್ಲಿ 74ನೇ ಸ್ವಾತಂತ್ರ್ಯೋತ್ಸವ ಆಚರಣೆ

ಕಾಸರಗೋಡು, ಆ.15: ಕೋವಿಡ್-19 ಎರಡನೇ ಮಹಾಯುದ್ಧದ ಬಳಿಕ ವಿಶ್ವ ಎದುರಿಸುತ್ತಿರುವ ಮಹಾ ದುರಂತ. ಈ ವಿಪತ್ತನ್ನು ಎದುರಿಸಲು ಎಲ್ಲರೂ ಒಂದೇ ಮನಸ್ಸಿನಿಂದ ಮುನ್ನುಗ್ಗಬೇಕಿದೆ ಎಂದು ಕೇರಳ ಕಂದಾಯ ಸಚಿವ ಇ. ಚಂದ್ರಶೇಖರನ್ ಅಭಿಪ್ರಾಯಿಸಿದ್ದಾರೆ.

ಅವರು ಇಂದು ಬೆಳಗ್ಗ ನಗರಸಭಾ ಸ್ಟೇಡಿಯಂನಲ್ಲಿ ನಡೆದ 74ನೇ ಸ್ವಾತಂತ್ರ್ಯೋತ್ಸವದ ಸರಳ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಧ್ವಜವಂದನೆ ಸ್ವೀಕರಿಸಿದ ಬಳಿಕ ಬಳಿಕ ಸಂದೇಶ ನೀಡಿದರು.

ಕೇರಳ ಇಂದು ಕೊರೋನ ಜೊತೆಗೆ ಪ್ರವಾಹ ಸಮಸ್ಯೆಯನ್ನು ಎದುರಿಸುತ್ತಿದೆ. ಮುನ್ನಾರ್ ಪೆಟ್ಟುಮುಡಿಯಲ್ಲಿ  ನಡೆದ ಭೂಕುಸಿತ, ಕರಿಪ್ಪೂರಿನಲ್ಲಿ ನಡೆದ ವಿಮಾನ ದುರಂತದಿಂದ ಹಲವು ಸಾವು ನೋವುಗಳು ಉಂಟಾಗಿವೆ. ಈ ಸಂಕಷ್ಟಕರ ಸಮಯದಲ್ಲಿ ದ್ವೇಷ, ಭೇದ ಮರೆತು ನಾವೆಲ್ಲರೂ  ಒಂದಾಗಬೇಕು. ಆಗ ಮಾತ್ರ ಸ್ವಾತಂತ್ರ್ಯಕ್ಕೆ ನೈಜ ಅರ್ಥ ಬರಲಿದೆ ಎಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎಂ.ಸಿ.ಖಮರುದ್ದೀನ್, ಎನ್.ಎ.ನೆಲ್ಲಿಕುನ್ನು, ಎಂ.ರಾಜಗೋಪಾಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ನಗರಸಭಾ ಅಧ್ಯಕ್ಷೆ ಬೀಫಾತಿಮ್ಮ ಇಬ್ರಾಹೀಂ, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಹಾಗೂ ಇತರ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

ಮೂವರು ವೈದ್ಯರು ಇಬ್ಬರು ದಾದಿಯರು, ಇಬ್ಬರು ಪಾರಾ ಮೆಡಿಕಲ್ ಸಿಬ್ಬಂದಿ, ಇಬ್ಬರು ಸ್ವಚ್ಛತಾ ಕಾರ್ಮಿಕರಿಗೆ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News