ತಾಳಮದ್ದಳೆಯ ಜೋಕಟ್ಟೆ ಮುಹಮ್ಮದ್ : ಡಾ.ಎಂ ಪ್ರಭಾಕರ ಜೋಶಿ

Update: 2020-08-15 19:00 GMT

ನಿನ್ನೆ ನಮ್ಮನ್ನಗಲಿದ ಕಲಾವಿದ, ಸಾಮಾಜಿಕ ಮುಂದಾಳು ಜೋಕಟ್ಟೆ ಗುತ್ತು ಬಿ.ಮುಹಮ್ಮದ್ ಓರ್ವ ವಿಶಿಷ್ಟ ವ್ಯಕ್ತಿತ್ವದ ಸಾಧಕ. ನನ್ನ ಹಲವು ದಶಕಗಳ ಆಪ್ತ. 1980-90ರ ದಶಕಗಳಲ್ಲಿ ಅರ್ಥಧಾರಿಯಾಗಿ ತಾಳಮದ್ದಳೆ ಕ್ಷೇತ್ರಕ್ಕೆ ಬಂದವರು ಮುಹಮ್ಮದ್. ಅವರಿಗೆ ಹಿರಿಯ ಕಲಾವಿದ ಸಂಘಟಕರಾದ ದಿ. ಪೊರ್ಕೋಡಿ ಸುಂದರ ಶೆಟ್ಟಿ, ಬಾಳ ಕೆ. ರಮಾನಾಥ ರಾಯರು ಪೋಷಕರು, ಗುರುಗಳು. ಶ್ರೇಣಿ ಅವರನ್ನು ವಿಶೇಷ ಸ್ಫೂರ್ತಿಯ ಮಹಾ ಕಲಾವಿದನ ಸ್ಥಾನದಲ್ಲಿ ಆದರಿಸುತ್ತಿದ್ದರು. ನಾನು ಅವರ ಓರ್ವ ಒಡನಾಡಿ ಎಂದು ಡಾ.ಎಂ ಪ್ರಭಾಕರ ಜೋಶಿ ತಿಳಿಸಿದ್ದಾರೆ.

ಆರಂಭದಲ್ಲಿ ಒಂದು ಕುತೂಹಲ ವ್ಯಕ್ತಿಯಾಗಿದ್ದ ಅವರು ಮುಂದೆ ಬರಿಯ ‘ಮುಸ್ಲಿಮ್ ಅರ್ಥಧಾರಿ’ಯಷ್ಟೇ ಆಗದೆ ಸಮರ್ಥ ಕಲಾವಿದರಾಗಿ ರೂಪುಗೊಂಡರು. ಬೇರೆ ಬೇರೆ ಕಾರಣಗಳಿಂದ ಅವರಿಗೆ ತಾಳಮದ್ದಳೆಯಲ್ಲಿ ಹೆಚ್ಚು ಪ್ರವರ್ತಿಸಲು ಆಗಲಿಲ್ಲ. ಆದರೆ ಸಕ್ರಿಯರಾಗಿದ್ದಷ್ಟು ಕಾಲ ಸಮರ್ಥ ಕಲಾವಿದರಾಗಿದ್ದರು. ಶೇಣಿ ಅವರೆದುರು ಅರ್ಥ ಹೇಳುವ ಮೂಲಕ ದೊಡ್ಡ ಕೂಟಕ್ಕೆ ಪ್ರವೇಶಿಸಿದ ಅವರು ಬಂದ ಅನೇಕ ಅವಕಾಶಗಳನ್ನು ವಿನಯದಿಂದಲೇ ನಿರಾಕರಿಸಿ, ಸೀಮಿತವಾಗಿ ಭಾಗವಹಿಸುತ್ತಿದ್ದರು. ಕೆಲವು ಬಾರಿ ವೇಷವನ್ನು ಧರಿಸಿ ರಂಗಕ್ಕೆ ಬಂದಿದ್ದರು.

ಒಳ್ಳೆಯ ಆಳ ಮತ್ತು ತೂಕವುಳ್ಳ ಕಂಠ, ಚೊಕ್ಕ ಭಾಷೆ ಮತ್ತು ಹದವಾದ ಪಾತ್ರ ಕಲ್ಪನೆ ಇದ್ದ ಅರ್ಥದಾರಿ ಮುಹಮ್ಮದ್, ಸಂವಾದಕ್ಕೆ ಒದಗುತ್ತಾ ಚರ್ಚೆ ವಿವಾದಗಳಲ್ಲಿ ಆಸಕ್ತರಾಗದೆ ಇದ್ದವರು. ಅವರ ಅಭಿವ್ಯಕ್ತಿ, ರಂಗ ಉಪಸ್ಥಿತಿ ಸಶಕ್ತವಾಗಿದ್ದವು. ಸಂಧಾನದ ದ್ರೌಪದಿ, ಭೀಮ, ಕೌರವ, ಪರ್ವದ ಕರ್ಣ, ಕೃಷ್ಣ , ವಾಲಿ ವಧೆಯ ವಾಲಿ ಮತ್ತಿತರ ಪಾತ್ರಗಳಲ್ಲಿ ಅವರಿಗೆ ಹಿಡಿತವಿತ್ತು. ನಾನೂ, ನನ್ನಂತೆ ಇತರ ಸಮಕಾಲೀನರೂ ಅವರ ಜೊತೆ ಹತ್ತಾರು ಕೂಟಗಳಲ್ಲಿ ಭಾಗವಹಿಸಿ ಖುಷಿ ಪಟ್ಟಿದ್ದೇವೆ. ಮುಹಮ್ಮದ್‌ರಿಗೆ ಧನ್ಯತೆಯನ್ನು ನೀಡಿದ ಕ್ಷಣ ಅವರಿಗೆ 2018ರಲ್ಲಿ ಕಲ್ಕೂರ ಪ್ರತಿಷ್ಠಾನವು ಶೇಣಿ ಪ್ರಶಸ್ತಿಯನ್ನು ನೀಡಿದ ಸಂದರ್ಭ. ರಾಜಕೀಯವನ್ನು ಪ್ರವೇಶಿಸಿ ಒಂದಿಷ್ಟು ಕಾಲ ದುಡಿದರೂ, ರಾಜಕೀಯದ ವರಸೆ ಗಳನ್ನು ಕರಗತಗೊಳಿಸಲಾಗದೆ (ಅಥವಾ ಅದಕ್ಕೆ ಒಗ್ಗದೆ), ಮುನ್ನುಗ್ಗದೆ ಉಳಿದವರು. ಸಕ್ರಿಯರಾಗಿದ್ದಷ್ಟು ಕಾಲ ಬಡವರ, ನ್ಯಾಯದ ಪರವಾಗಿ ಕೆಲಸ ಮಾಡಿದ್ದರು. ಕಲೆ, ರಾಜಕೀಯ ಎರಡರಲ್ಲೂ ಕೆಲಸಕ್ಕೆ ಸೂಕ್ತ ಅಧ್ಯಯನ, ಹೋಂವರ್ಕ್ ಮಾಡುತ್ತಿದ್ದರು.

ಒಂದು ಕಾರಣಕ್ಕಾಗಿ ಇಲ್ಲಿ ಅವರನ್ನು ಇಲ್ಲಿ ಜ್ಞಾಪಿಸಲೇಬೇಕು. ಹಿರಿಯ ಕಲಾವಿದ ವಿದ್ವಾಂಸರೊಬ್ಬರು ಭೂ ಸುಧಾರಣೆಯ ಫಲವಾಗಿ ಆಸ್ತಿಯನ್ನು ಮತ್ತು ವಶವಿದ್ದ ಒಣ ಭೂಮಿಯನ್ನೂ ಕಳೆದುಕೊಳ್ಳುವ ಸ್ಥಿತಿ ಬಂದಾಗ ಭೂನ್ಯಾಯ ಮಂಡಳಿಯ ಸದಸ್ಯರಾಗಿದ್ದ ಮುಹಮ್ಮದ್, ವಿಷಯ ಪರಿಶೀಲನೆ ಮಾಡಿ, ಅಷ್ಟನ್ನೂ ಅವರಿಗೆ ಒತ್ತಡಗಳ ಮಧ್ಯೆ ಉಳಿಸಿ ಕೊಟ್ಟಿದ್ದರು.

ಪ್ರದರ್ಶನವಿಲ್ಲದ ಸ್ನೇಹಶೀಲತೆಯ ಮಿತ್ರ ಮುಹಮ್ಮದರು ಇತ್ತೀಚಿನ ವರ್ಷಗಳಲ್ಲಿ ಅನಾರೋಗ್ಯದಿಂದ ರಂಗದಿಂದ ದೂರ ಉಳಿದಿದ್ದರೂ, ಕಾರ್ಯಕ್ರಮಗಳಿಗೆ ಬಂದು ನೋಡಿ, ಕೇಳಿ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು. ಕಲಾವಿದ ವ್ಯಕ್ತಿ ನೆಲೆಯಲ್ಲಿ ನೆನಪಿನಲ್ಲಿ ಉಳಿಯುವವರು ನಮ್ಮ ಅರ್ಥಧಾರಿ ಜೋಕಟ್ಟೆ ಗುತ್ತಿನ ಬಿ.ಮುಹಮ್ಮದರು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News