ದನವನ್ನು ಓಡಿಸಿದ್ದಕ್ಕೆ ಇಬ್ಬರ ಮೇಲೆ ಹಲ್ಲೆ ನಡೆಸಿದ ನಕಲಿ ಗೋರಕ್ಷಕರ ಗುಂಪು

Update: 2020-08-16 18:50 GMT

ಶ್ರೀನಗರ: ತಮ್ಮ ಜಮೀನಿನಲ್ಲಿ ಮೇಯುತ್ತಿದ್ದ ದನವೊಂದನ್ನು ಓಡಿಸಿದ್ದಕ್ಕಾಗಿ ನಕಲಿ ಗೋರಕ್ಷಕರ ಗುಂಪೊಂದು ಇಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಮ್ಮುವಿನ ರೀಯಸಿ ಜಿಲ್ಲೆಯಲ್ಲಿ ನಡೆದಿದೆ.

ಕೆಲ ದಿನಗಳ ಹಿಂದೆ ಗರ್ಹಿ ಗ್ರಾಮದಲ್ಲಿ ನಡೆದ ಈ ಘಟನೆಯ ವಿಡಿಯೋ ಈಗ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ.

40 ವರ್ಷದ ಮುಹಮ್ಮದ್ ಅಸ್ಗರ್ ಮತ್ತು ಅವರ ಸಂಬಂಧಿ 26 ವರ್ಷದ ಜಾವಿದ್ ಅಹ್ಮದ್ ಗೆ ದುಷ್ಕರ್ಮಿಗಳು ಗುಂಪೊಂದು ಹೊಡೆಯುತ್ತಿರುವುದು,  ಒದೆಯುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಇಬ್ಬರನ್ನು ಬಿಟ್ಟು ಬಿಡುವಂತೆ ಪೊಲೀಸರು ದುಷ್ಕರ್ಮಿಗಳಲ್ಲಿ ಕೇಳಿಕೊಳ್ಳುತ್ತಿರುವುದೂ ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.

ಈ ನಕಲಿ ಗೋರಕ್ಷಕರು ಹಲ್ಲೆ ನಡೆಸುವ ವೇಳೆ ‘ಭಾರತ್ ಮಾತಾ ಕೀ ಜೈ’ ಮತ್ತು ‘ದೇಶ್ ಕೆ ಗದ್ದಾರೊಂ ಕೊ, ಗೋಲಿ ಮಾರೋ ಸಾಲೋಂಕೋ” ಎನ್ನುವ ಘೋಷಣೆಗಳನ್ನು ಕೂಗುತ್ತಾರೆ.

ಜಮೀನಿನಲ್ಲಿ ಮೇಯುತ್ತಿದ್ದ ದನವನ್ನು ಅಸ್ಗರ್ ರ ಪುತ್ರ ಓಡಿಸಿದ್ದ. ಈ ಸಂದರ್ಭ ಹಸುವಿಗೆ ಗಾಯವಾಗಿತ್ತು. ಈ ವಿಚಾರದಲ್ಲಿ ಗ್ರಾಮದ ಮುಖ್ಯಸ್ಥನ ಮನೆಯಲ್ಲಿ ಮಾತುಕತೆಗೆ ಕರೆಯಲಾಗಿತ್ತು. “ಅಸ್ಗರ್ ನ ಪುತ್ರ ಹಸುವಿಗೆ ಹೊಡೆದಿದ್ದಾನೆ ಎಂದು ಅವರು ಆರೋಪಿಸಿದರು. ಆತನೊಂದಿಗೆ ಮಾತನಾಡಬೇಕು ಎಂದು ಹೇಳಿದ್ದರು. ನನ್ನ ಸಂಬಂಧಿಯೂ ಜೊತೆಗೆ ಹೋಗಿದ್ದರು. ಸರಪಂಚ ಸಂಜಯ್ ಸಿಂಗ್ ಮನೆಯೊಳಕ್ಕೆ ಅವರು ಪ್ರವೇಶಿಸುತ್ತಿದ್ದಂತೆಯೇ ಗುಂಪೊಂದು ಅವರ ಮೇಲೆ ದಾಳಿ ನಡೆಸಿ ಹಲ್ಲೆ ನಡೆಸಲು ಆರಂಭಿಸಿತು” ಎಂದು ಹಲ್ಲೆಗೊಳಗಾದವರ ಸಂಬಂಧಿ ಮುಶ್ತಾಕ್ ಅಹ್ಮದ್ ಹೇಳಿದ್ದಾರೆ.

   ಸುಮಾರು 20 ಮಂದಿಯಿದ್ದ ತಂಡದ ಆಕ್ರಮಣದಿಂದ ಗಂಭೀರ ಗಾಯಗೊಂಡಿರುವ 48 ವರ್ಷದ ಮುಹಮ್ಮದ್ ಅಸ್ಗರ್‌ನನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಗರಿ ಗಬ್ಬರ್ ಗ್ರಾಮದಲ್ಲಿ ಕೆಲ ದಿನದ ಹಿಂದೆ ಘಟನೆ ನಡೆದಿದ್ದು ತಮ್ಮ ಹೊಲದಲ್ಲಿ ಮೇಯುತ್ತಿದ್ದ ಕೆಲವು ಹಸುಗಳನ್ನು ಅಸ್ಗರ್‌ನ ಮಗ ಓಡಿಸಿದಾಗ ಹಸುವೊಂದಕ್ಕೆ ಗಾಯವಾಗಿದೆ. ಈ ಹಿನ್ನೆಲೆಯಲ್ಲಿ ಹಸುವಿನ ಮಾಲಕ ನೀಡಿದ ದೂರಿನಂತೆ ಗ್ರಾಮದ ಸರಪಂಚರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ನಡೆಯುತ್ತಿದ್ದಾಗ ಸುಮಾರು 20 ಮಂದಿಯಿದ್ದ ತಂಡವೊಂದು ಏಕಾಏಕಿ ಘೋಷಣೆ ಕೂಗುತ್ತಾ ದೊಣ್ಣೆಯಿಂದ ಅಸ್ಗರ್‌ನ ತಲೆಯ ಮೇಲೆ ಹೊಡೆಯಲಾರಂಭಿಸಿದೆ. ಅಲ್ಲೇ ಇದ್ದ ಪೊಲೀಸರು ರಕ್ಷಣೆಗೆ ಆಗಮಿಸುವಷ್ಟರಲ್ಲಿ ಅಸ್ಗರ್‌ಗೆ ಗಂಭೀರ ಸ್ವರೂಪದ ಗಾಯವಾಗಿದ್ದು ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆಯ ವೀಡಿಯೊ ವೈರಲ್ ಆಗಿದ್ದು , ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಿಡಿಪಿ ಪಕ್ಷದ ಹಿರಿಯ ಮುಖಂಡ ನಯೀಮ್ ಅಖ್ತರ್ ಮತ್ತು ಗುಫ್ತಾರ್ ಅಹ್ಮದ್ ಪೊಲೀಸರನ್ನು ಆಗ್ರಹಿಸಿದ್ದಾರೆ.

  ಬಳಿಕ ಪೊಲೀಸರು ಎರಡು ಎಫ್‌ಐಆರ್ ದಾಖಲಿಸಿದ್ದಾರೆ. ಹಸುವನ್ನು ಮಾರಕ ಆಯುಧದಿಂದ ಗಾಯಗೊಳಿಸಿ ಸಮುದಾಯವೊಂದರ ಭಾವನೆಗೆ ಘಾಸಿ ಎಸಗಿದ ಆರೋಪದಲ್ಲಿ ಅಸ್ಗರ್‌ನ 16 ವರ್ಷದ ಪುತ್ರನ ವಿರುದ್ಧ ಮೊದಲು ಎಫ್‌ಐಆರ್ ದಾಖಲಿಸಲಾಗಿತ್ತು . ಬಳಿಕ ತಾನು ಪಟ್ಟುಬಿಡದೆ ಒತ್ತಡ ಹೇರಿದ್ದರಿಂದ ಅಸ್ಗರ್ ಮೇಲೆ ಹಲ್ಲೆಗೈದವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಥಳೀಯ ಕಾರ್ಯಕರ್ತ ಅಬ್ಬಾಸ್ ಅಲಿ ಹೇಳಿದ್ದಾರೆ.

 ಹಸುವಿನ ಮೇಲೆ ಹರಿತವಾದ ಆಯುಧದಿಂದ ಹೊಡೆದಿದ್ದು ಆಳವಾದ ಗಾಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಣಿಗಳ ವಿರುದ್ಧ ಹಿಂಸೆ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ, ಕಾನೂನನ್ನು ಕೈಗೆತ್ತಿಕೊಂಡು ಆರೋಪಿಯ ತಂದೆಯ ಮೇಲೆ ಹಲ್ಲೆ ನಡೆಸಿದ್ದಕ್ಕೆ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರಶ್ಮಿ ವಝೀರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News