ತುಂಬೆ ಅಹ್ಮದ್ ಹಾಜಿ ನಿಧನಕ್ಕೆ ಬ್ಯಾರೀಸ್ ಕಲ್ಚರಲ್ ಪೋರಂ ಸಂತಾಪ

Update: 2020-08-17 09:15 GMT

ಮಂಗಳೂರು, ಆ.17: ಹಿರಿಯ ಉದ್ಯಮಿ, ಸಾಮಾಜಿಕ ಧಾರ್ಮಿಕ ಧುರೀಣ, ಶೈಕ್ಷಣಿಕ ಕ್ಷೇತ್ರದ ಸಾಧಕ ಬಿ.ಎ. ಸಮೂಹ ಸಂಸ್ಥೆಗಳ ಸ್ಥಾಪಕ ಬಿ.ಅಹ್ಮದ್ ಹಾಜಿ ಮೊಹಿಯುದ್ದೀನ್ ತುಂಬೆ ಅವರ ನಿಧನಕ್ಕೆ ಬ್ಯಾರೀಸ್ ಕಲ್ಚರಲ್ ಪೋರಂ(ಬಿಸಿಎಫ್) ಟ್ರಸ್ಟ್, ಮಂಗಳೂರು ಮತ್ತು ಬ್ಯಾರೀಸ್ ಕಲ್ಚರಲ್ ಫೋರಂ ಯುಎಇ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ನಿಸ್ವಾರ್ಥ, ಉದಾತ್ತ ಮನೋಭಾವದ ಸಮಾಜ ಸೇವಕರಾಗಿದ್ದ ಅಹ್ಮದ್ ಹಾಜಿ ಹೆಸರಾಂತ ಉದ್ಯಮಿ, ಶೈಕ್ಷಣಿಕ ಕ್ಷೇತ್ರದ ಸಾಧಕರಾಗಿ ಗುರುತಿಸಿಕೊಂಡಿದ್ದರು. ಆರೋಗ್ಯ ಸೇವೆ ಮತ್ತು ಶಿಕ್ಷಣದ ಮೂಲಕ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಾಮಾಜಿಕ ಅಭಿವೃದ್ಧಿಗೆ ಅವರು ನೀಡಿರುವ ಕೊಡುಗೆ, ಸಮರ್ಪಣಾ ಮನೋಭಾವದ ಸೇವೆ ಪ್ರಶಂಸನೀಯ. ಐವತ್ತು ವರ್ಷಗಳ ಹಿಂದೆ ಅವರು ಸ್ಥಾಪಿಸಿದ ಬಿ.ಎ. ಸಮೂಹ ಸಂಸ್ಥೆ ಇಂದು ಆರೋಗ್ಯ, ವಸತಿ, ಶಿಕ್ಷಣ, ರಿಯಲ್ ಎಸ್ಟೇಟ್, ಆಮದು ಮತ್ತು ರಫ್ತು ವ್ಯವಹಾರ ಸಹಿತ ವಿವಿಧ ಕ್ಷೇತ್ರಗಳಲ್ಲಿ ಎತ್ತರಕ್ಕೆ ಬೆಳೆದಿದ್ದು, ತನ್ನದೇ ಛಾಪು ಮೂಡಿಸಿದೆ. ಮೊಹಿಯುದ್ದೀನ್ ಎಜ್ಯುಕೇಶನಲ್ ಟ್ರಸ್ಟ್ ಸ್ಥಾಪಕರಾಗಿರುವ ಅಹ್ಮದ್ ಹಾಜಿ, ಬದ್ರಿಯ ಶಿಕ್ಷಣ ಸಂಸ್ಥೆ ಮತ್ತು ನವಭಾರತ ರಾತ್ರಿ ಪ್ರೌಢಶಾಲೆಯ ಅಧ್ಯಕ್ಷರಾಗಿದ್ದರೆ, ಇಸ್ಲಾಮಿಕ್ ಅಕಾಡಮಿ ಆಫ್ ಎಜ್ಯುಕೇಶನ್‌ನ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದ್ದಾರೆ.

ಬಿಸಿಎಫ್‌ನ ಸ್ಥಾಪಕ ಪೋಷಕರಾಗಿರುವ ಡಾ.ತುಂಬೆ ಮೊಯ್ದಿನ್ ಅವರು ಅಜ್ಮಾನ್‌ನಲ್ಲಿ ಸ್ಥಾಪಿಸಿರುವ ಗಲ್ಫ್ ಮೆಡಿಕಲ್ ಯುನಿರ್ವಸಿಟಿ ಮತ್ತು ತುಂಬೆ ಮೆಡಿಕಲ್ ಯುನಿರ್ವಸಿಟಿ ಆಸ್ಪತ್ರೆಯು ಬಿ.ಎ. ಸಮೂಹ ಸಂಸ್ಥೆಯ ಹಿರಿಮೆಗೆ ಮತ್ತೊಂದು ಗರಿಯಾಗಿದೆ. ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿನ ಮುಂದಾಳುವಾಗಿರುವ ಬಿ.ಅಹ್ಮದ್ ಹಾಜಿಯವರ ಅಗಲುವಿಕೆಯ ದುಃಖವನ್ನು ಭರಿಸಲು ಅವರ ಕುಟುಂಬಕ್ಕೆ ಅಲ್ಲಾಹು ಶಕ್ತಿ ನೀಡಲಿ ಎಂದು ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್, ಬಿಸಿಎಫ್‌ನ ಎಲ್ಲ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರಾರ್ಥಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News