ಕೊಡೇರಿ ಬಂದರಿನಲ್ಲಿ ನಾಡದೋಣಿ ದುರಂತ: ಮೃತದೇಹ ಪತ್ತೆ; ಮುಂದುವರೆದ ಶೋಧ

Update: 2020-08-17 16:20 GMT

ಬೈಂದೂರು, ಆ.17: ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಬಂದರಿನಲ್ಲಿ ಸಂಭವಿಸಿದ ನಾಡದೋಣಿ ದುರಂತದಲ್ಲಿ ಕಣ್ಮರೆಯಾಗಿರುವ ನಾಲ್ವರ ಪೈಕಿ ಓರ್ವ ಮೀನುಗಾರರ ಮೃತದೇಹ ಇಂದು ಬೆಳಗ್ಗೆ 9ಗಂಟೆ ಸುಮಾರಿಗೆ ನಾಗೂರು ಹೊಸಹಿತ್ಲು ಸಮುದ್ರ ತೀರದಲ್ಲಿ ಪತ್ತೆಯಾಗಿದೆ.

ಮೃತರನ್ನು ಉಪ್ಪುಂದ ಗ್ರಾಮದ ಕರ್ಕಿಕಳಿ ನಿವಾಸಿ ಬಿ.ನಾಗ ಖಾರ್ವಿ(55) ಎಂದು ಗುರುತಿಸಲಾಗಿದೆ. ಉಳಿದಂತೆ ನಾಪತ್ತೆಯಾಗಿರುವ ಲಕ್ಷ್ಮಣ್ ಖಾರ್ವಿ, ಮಂಜುನಾಥ್ ಖಾರ್ವಿ ಹಾಗೂ ಶೇಖರ್ ಖಾರ್ವಿ ಎಂಬವರಿಗಾಗಿ ಶೆಧ ಕಾರ್ಯ ಮುಂದುವರೆಸಲಾಗಿದೆ.

ಆ.16ರಂದು ಮಧ್ಯಾಹ್ನ 2:30ರ ಸುಮಾರಿಗೆ ಸಂಭವಿಸಿದ ಸಾಗರಶ್ರೀ ನಾಡದೋಣಿ ದುರಂತದಲ್ಲಿ 12 ಮಂದಿ ಮೀನುಗಾರರ ಪೈಕಿ ನಾಲ್ಕು ಮಂದಿ ಸಮುದ್ರ ಪಾಲಾಗಿದ್ದರು. ಮೃತ ನಾಗ ಖಾರ್ವಿ, ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ. ಇಡೀ ಕುಟುಂಬಕ್ಕೆ ಇವರೇ ಆಧಾರಸ್ತಂಭವಾಗಿದ್ದರು. ಇವರ ಪುತ್ರರು ಕೂಡ ಇದೇ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶೋಧ ಕಾರ್ಯಕ್ಕೆ ಅಡ್ಡಿ: ಆ.16ರಂದು ರಾತ್ರಿ 8ಗಂಟೆಗೆ ಸ್ಥಗಿತಗೊಳಿಸಿದ್ದ ಕಣ್ಮರೆಯಾಗಿರುವವರ ಶೋಧ ಕಾರ್ಯ, ಇಂದು ಬೆಳಗ್ಗೆಯಿಂದ ಮತ್ತೆ ಮುಂದುವರೆಸಲಾಯಿತು. ಆದರೆ ಪ್ರತಿಕೂಲ ಹವಾಮಾನದಿಂದ ಶೋಧ ಕಾರ್ಯಕ್ಕೆ ಅಡ್ಡಿ ಉಂಟಾಯಿತು.

ಮಳೆ ಹಾಗೂ ಅಬ್ಬರದ ಅಲೆಗಳಿಂದ ಮುಳುಗು ತಜ್ಞರು ಸಮುದ್ರಕ್ಕೆ ಇಳಿ ಯಲು ಹಿಂದೇಟು ಹಾಕಿದರು. ಬಳಿಕ ಡ್ರೋನ್ ಕ್ಯಾಮೆರಾ ಬಳಸಿ ಹುಡು ಕಾಟ ನಡೆಸಲಾಯಿತು. ಆಗ ಕೊಡೇರಿ ಬಂದರಿನ ಬ್ರೇಕ್ ವಾಟರ್‌ನಲ್ಲಿ ಒಂದು ಮೃತದೇಹ ಕಂಡುಬಂತು. ಆದರೆ ಕಡಲು ತೀರಾ ಪ್ರಕ್ಷುಬ್ಧ ಆಗಿರುವು ದರಿಂದ ಮೃತದೇಹ ಪತ್ತೆ ಕಾರ್ಯ ಸಾಧ್ಯವಾಗಲಿಲ್ಲ ಎಂದು ಕರಾವಳಿ ಕಾವಲು ಪಡೆಯ ಗಂಗೊಳ್ಳಿ ಠಾಣಾ ನಿರೀಕ್ಷಕ ಸಂದೀಪ್ ತಿಳಿಸಿದ್ದಾರೆ.

ಕರಾವಳಿ ಕಾವಲು ಪಡೆಯ ಪೊಲೀಸರು, ಬೈಂದೂರು ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ಸಂಜೆ 7:30ರವರೆಗೆ ಉಳಿದ ಮೂವರಿಗಾಗಿ ಶೋಧ ಕಾರ್ಯ ನಡೆಸಿದರು. ಆದರೆ ಯಾವುದೇ ಮೃತದೇಹಗಳು ಪತ್ತೆಯಾಗಿಲ್ಲ. ಸ್ಥಳಕ್ಕೆ ಕರಾವಳಿ ಕಾವಲು ಪಡೆಯ ಎಸ್ಪಿ ಆರ್.ಚೇತನ್, ಮಾಜಿ ಶಾಸ ಗೋಪಾಲ ಪೂಜಾರಿ ಭೇಟಿ ನೀಡಿದರು.

ಕೋಸ್ಟ್ ಗಾರ್ಡ್‌ನಿಂದ ಕಾರ್ಯಾಚರಣೆ

ಕಡಲು ಸಾಕಷ್ಟು ಪ್ರಕ್ಷುಬ್ಧ ಆಗಿದ್ದುದರಿಂದ ಸಮುದ್ರ ಮಧ್ಯೆ ಬೋಟಿನಲ್ಲಿ ಹುಡುಕಾಟ ನಡೆಸಲು ಸಾಧ್ಯವಾಗದ ಕಾರಣ ಮಂಗಳೂರಿನ ಕೋಸ್ಟ್ ಗಾರ್ಡ್‌ನ ಮೊರೆ ಹೋಗಲಾಯಿತು.

ಮಧ್ಯಾಹ್ನ ವೇಳೆ ಸ್ಥಳಕ್ಕೆ ಆಗಮಿಸಿದ ಕೋಸ್ಟ್ ಗಾರ್ಡ್ ಹಡಗು, ಸುಮಾರು ಒಂದು ನಾಟೆಕಲ್ ಮೈಲ್ ದೂರದ ಸಮುದ್ರದಲ್ಲಿ ಕಣ್ಮರೆ ಯಾಗಿರುವರಿಗೆ ಶೋಧ ಕಾರ್ಯ ನಡೆಸಿತು. ಆದರೆ ಯಾವುದೇ ಸುಳಿವು ಲಭ್ಯವಾಗಲಿಲ್ಲ. ಸಂಜೆ 6ಗಂಟೆ ಸುಮಾರಿಗೆ ಕೋಸ್ಟ್ ಗಾರ್ಡ್ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿ ಮಂಗಳೂರಿಗೆ ವಾಪಾಸ್ಸಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News