ಸುಶಾಂತ್ ಸಹೋದರಿ ಅಸಭ್ಯವಾಗಿ ವರ್ತಿಸಿದ್ದರು: ರಿಯಾ ಚಕ್ರವರ್ತಿ ಆರೋಪ

Update: 2020-08-18 15:28 GMT

ಮುಂಬೈ, ಆ.18: ಹಿಂದಿ ಚಿತ್ರನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಳ್ಳಲು ಅವರ ಕುಟುಂಬದವರೇ ಕಾರಣ ಎಂದು ಆರೋಪಿಸುತ್ತಿರುವ ಸುಶಾಂತ್ ಸ್ನೇಹಿತೆ ರಿಯಾ ಚಕ್ರವರ್ತಿ, ಮಂಗಳವಾರ ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ.

ಸುಶಾಂತ್ ಸಹೋದರಿ ಕುಡಿದ ಮತ್ತಿನಲ್ಲಿ ತನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದರು ಎಂಬ ರಿಯಾ ಹೇಳಿಕೆಯನ್ನು ಆಕೆಯ ವಕೀಲರು ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ್ದಾರೆ.

‘2019ರ ಎಪ್ರಿಲ್‌ನಲ್ಲಿ ರಿಯಾ ಸುಶಾಂತ್ ನೊಂದಿಗೆ ಆತನ ಮನೆಯಲ್ಲಿದ್ದರು. ಮದ್ಯದ ಅಮಲಿನಲ್ಲಿದ್ದ ಸುಶಾಂತ್ ಸಹೋದರಿ ಆ ದಿನ ರಾತ್ರಿ ರಿಯಾ ಮಲಗಿದ್ದ ಹಾಸಿಗೆಗೆ ಬಂದು ಅಸಭ್ಯವಾಗಿ ವರ್ತಿಸಿದ್ದರು. ಇದರಿಂದ ಆಘಾತಗೊಂಡ ರಿಯಾ, ತಕ್ಷಣ ಅಲ್ಲಿಂದ ತೊಲಗುವಂತೆ ಹೇಳಿದರೂ ಆಕೆ ಕೇಳಲಿಲ್ಲ. ಅಂತಿಮವಾಗಿ ರಿಯಾಳೇ ಮನೆಯಿಂದ ಹೊರ ಹೋದಳು. ಬಳಿಕ ಈ ವಿಷಯವನ್ನು ರಿಯಾ ಸುಶಾಂತ್ ಗೆ ತಿಳಿಸಿದ್ದು ಈ ಬಗ್ಗೆ ಸುಶಾಂತ್ ಮತ್ತವರ ಸಹೋದರಿ ಮಧ್ಯೆ ವಾಗ್ವಾದ ನಡೆದಿದೆ. ಈ ಘಟನೆಯ ಬಳಿಕ ರಿಯಾ ಹಾಗೂ ಸುಶಾಂತ್ ಕುಟುಂಬದ ನಡುವಿನ ಸಂಬಂಧ ಹದಗೆಡುತ್ತಾ ಹೋಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೆಲ ಸಮಯ ಹೆತ್ತವರೊಂದಿಗೆ ಇರುವಂತೆ ಸುಶಾಂತ್ ತಿಳಿಸಿದ್ದ ಹಿನ್ನೆಲೆಯಲ್ಲಿ ತಾನು ಅವರಿಂದ ದೂರವಾಗಿದ್ದೆ. ಆದರೆ ಏನಾದರೂ ಸಮಸ್ಯೆಯಾದರೆ ತನಗೆ ಅಥವಾ ತನ್ನ ಸಹೋದರನಿಗೆ ತಿಳಿಸುವಂತೆ ಹೇಳಿದ್ದೆ. ಈ ಮಧ್ಯೆ, ಒಮ್ಮೆ ತನ್ನ ಮನೆಗೆ ಬರುವಂತೆ ಸುಶಾಂತ್ ತನ್ನ ಕುಟುಂಬದವರನ್ನು ಕೋರಿದ್ದರು. ಆದರೆ ಅವರು ನಿರಾಕರಿಸಿದ್ದರು. ಹಲವು ದಿನ ನಿರಂತರ ಬೇಡಿಕೊಂಡ ಬಳಿಕ ಒಬ್ಬ ಸಹೋದರಿ ಆತನ ಮನೆಗೆ ಭೇಟಿ ನೀಡಲು ಒಪ್ಪಿಕೊಂಡಿದ್ದಳು ಎಂದೂ ರಿಯಾಳ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News