ಧಾರ್ಮಿಕ ದ್ವೇಷ ಹರಡಲು ಬಿಜೆಪಿಯಿಂದ ಸಾಮಾಜಿಕ ಜಾಲತಾಣ ಬಳಕೆ: ಶಿವಸೇನೆ ಆರೋಪ

Update: 2020-08-18 15:48 GMT
Photo: twitter.com/ShivSena

ಮುಂಬೈ, ಆ.18: ಕೇಂದ್ರದಲ್ಲಿ 2014ರಲ್ಲಿ ಅಧಿಕಾರಕ್ಕೆ ಬಂದಂದಿನಿಂದಲೂ ಬಿಜೆಪಿಯು ಸಾಮಾಜಿಕ ಜಾಲತಾಣವನ್ನು ಧಾರ್ಮಿಕ ದ್ವೇಷ ಹರಡಲು ಬಳಸುವ ಮೂಲಕ ರಾಜಕೀಯ ಲಾಭ ಮತ್ತು ಚುನಾವಣೆಯಲ್ಲಿ ಗರಿಷ್ಟ ಪ್ರಯೋಜನ ಪಡೆದಿದೆ ಎಂದು ಶಿವಸೇನೆ ಆರೋಪಿಸಿದೆ.

ಬಿಜೆಪಿಯ ದ್ವೇಷ ಹೇಳಿಕೆಯ ವಿರುದ್ಧ ಕ್ರಮ ಕೈಗೊಳ್ಳಲು ಫೇಸ್‌ಬುಕ್ ಹಿಂದೇಟು ಹಾಕಿದೆ ಎಂಬ ಅಮೆರಿಕದ ವಾಲ್‌ಸ್ಟ್ರೀಟ್ ಜರ್ನಲ್ ಪತ್ರಿಕೆಯ ವರದಿಯನ್ನು ಉಲ್ಲೇಖಿಸಿ ಶಿವಸೇನೆಯ ಮುಖವಾಣಿ ‘ಸಾಮ್ನ’ದಲ್ಲಿ ಮಂಗಳವಾರ ಪ್ರಕಟವಾದ ಸಂಪಾದಕೀಯ ಬರಹದಲ್ಲಿ, ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಬೇಕು. ಆದರೆ ಇದನ್ನು ದ್ವೇಷ ಹಂಚಲು ಮತ್ತು ದೇಶವನ್ನು ವಿಭಜಿಸಲು ಬಳಸಿಕೊಂಡರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು. ದ್ವೇಷಪೂರಿತ ಹೇಳಿಕೆ ಪೋಸ್ಟ್ ಮಾಡುತ್ತಿರುವ ವ್ಯಕ್ತಿ ಆಡಳಿತ ಪಕ್ಷದವ ಎಂಬ ಕಾರಣಕ್ಕೆ ಈ ಬಗ್ಗೆ ಫೇಸ್‌ಬುಕ್ ಜಾಣಕುರುಡು ತೋರಬಾರದು ಎಂದು ಹೇಳಿದೆ.

 2014ರಲ್ಲಿ ಸಾಮಾಜಿಕ ಜಾಲತಾಣ ಸೇನೆಯ ಕಾರ್ಯ ಚುನಾವಣಾ ಫಲಿತಾಂಶದ ಮೇಲೆ ಭಾರೀ ಪ್ರಭಾವ ಬೀರಿದ್ದು ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯ ಗೆಲುವಿಗೆ ಇದು ಕಾರಣವಾಗಿತ್ತು. ಕಳೆದ 7 ವರ್ಷಗಳಿಂದ ಸತ್ಯವನ್ನು ತಿರುಚಲಾಗುತ್ತಿದೆ ಮತ್ತು ಸುಳ್ಳು ವಿಷಯವನ್ನು ಬಹಿರಂಗವಾಗಿ ಪ್ರತಿಪಾದಿಸಲಾಗುತ್ತಿದೆ. ರಾಜಕೀಯ ಲಾಭಕ್ಕಾಗಿ ಧರ್ಮದ ವಿರುದ್ಧ ದ್ವೇಷಭಾವನೆ ಮತ್ತು ಗಾಳಿ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಶಿವಸೇನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News