ಬಿಎಸ್‌ಎಫ್‌ನ ನೂತನ ಮುಖ್ಯಸ್ಥರಾಗಿ ರಾಕೇಶ ಅಸ್ಥಾನಾ ಅಧಿಕಾರ ಸ್ವೀಕಾರ

Update: 2020-08-18 17:25 GMT

ಹೊಸದಿಲ್ಲಿ,ಆ.18: ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳೊಂದಿಗಿನ ಗಡಿ ರಕ್ಷಣೆಯ ಹೊಣೆಯನ್ನು ಹೊತ್ತಿರುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯ ನೂತನ ಮಹಾನಿರ್ದೇಶಕರಾಗಿ ಐಪಿಎಸ್ ಅಧಿಕಾರಿ ರಾಕೇಶ ಅಸ್ಥಾನಾ ಅವರು ಮಂಗಳವಾರ ಇಲ್ಲಿ ಅಧಿಕಾರ ಸ್ವೀಕರಿಸಿದರು.

1984ರ ತಂಡದ ಗುಜರಾತ್ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿರುವ ಅಸ್ಥಾನಾ ತನ್ನ ಬ್ಯಾಚ್‌ಮೇಟ್ ಆಗಿದ್ದ ಐಟಿಬಿಪಿಯ ಮಹಾನಿರ್ದೇಶಕ ಎಸ್.ಎಸ್.ದೇಸವಾಲ್ ಅವರಿಂದ ಅಧಿಕಾರ ದಂಡವನ್ನು ಸ್ವೀಕರಿಸಿದರು.

 ಬಿಎಸ್‌ಎಫ್‌ನ ಆಗಿನ ಡಿಜಿ ವಿವೇಕ ಜೊಹ್ರಿ ಅವರು ಮಧ್ಯಪ್ರದೇಶ ಪೊಲೀಸ್ ಮುಖ್ಯಸ್ಥರಾಗಿ ವರ್ಗಾವಣೆಗೊಂಡ ಬಳಿಕ ಮಾ.11ರಿಂದ ದೇಸವಾಲ್ ಅವರು ಬಿಎಸ್‌ಎಫ್ ಮುಖ್ಯಸ್ಥರಾಗಿ ಹೆಚ್ಚುವರಿ ಅಧಿಕಾರವನ್ನು ವಹಿಸಿಕೊಂಡಿದ್ದರು. ಬಿಎಸ್‌ಎಫ್ ಸುಮಾರು 2.65 ಲ.ಸಿಬ್ಬಂದಿಗಳನ್ನು ಒಳಗೊಂಡಿದೆ.

ಅಸ್ಥಾನಾ ಬಿಎಸ್‌ಎಫ್‌ನ 27ನೇ ಮುಖ್ಯಸ್ಥರಾಗಿದ್ದು,ಮುಂದಿನ ವರ್ಷದ ಜುಲೈನಲ್ಲಿ ತನ್ನ ನಿವೃತ್ತಿಯವರೆಗೂ ಅಧಿಕಾರದಲ್ಲಿರುವ ನಿರೀಕ್ಷೆಯಿದೆ.

ಈವರೆಗೆ ನಾಗರಿಕ ವಾಯುಯಾನ ಭದ್ರತಾ ಘಟಕದ ಡಿಜಿಯಾಗಿ ಸೇವೆ ಸಲ್ಲಿಸುತ್ತಿದ್ದ ಅಸ್ಥಾನಾ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊ (ಎನ್‌ಸಿಬಿ) ಮುಖ್ಯಸ್ಥರಾಗಿ ಹೆಚ್ಚುವರಿ ಅಧಿಕಾರವನ್ನೂ ವಹಿಸಿಕೊಂಡಿದ್ದರು. ಅಸ್ಥಾನಾ ಮುಂದೆಯೂ ಈ ಅಧಿಕಾರವನ್ನು ನಿರ್ವಹಿಸಲಿದ್ದಾರೆ.

2018ರಲ್ಲಿ ಸಿಬಿಐನ ವಿಶೇಷ ನಿರ್ದೇಶಕರಾಗಿದ್ದಾಗ ತನ್ನ ಹಿರಿಯ ಅಧಿಕಾರಿ ಹಾಗೂ ಸಿಬಿಐ ನಿರ್ದೇಶಕ ಅಲೋಕ ವರ್ಮಾ ಜೊತೆ ಜಗಳದಿಂದಾಗಿ ಅಸ್ಥಾನಾ ಸುದ್ದಿಯಾಗಿದ್ದರು. ಇಬ್ಬರೂ ಪರಸ್ಪರರ ವಿರುದ್ಧ ಭ್ರಷ್ಟಾಷಾರದ ಆರೋಪಗಳನ್ನು ಹೊರಿಸಿದ್ದರು. ನಂತರ ಸರಕಾರವು ಇಬ್ಬರನ್ನೂ ಸಿಬಿಐ ಹುದ್ದೆಗಳಿಂದ ತೆಗೆದಿತ್ತು ಮತ್ತು ಬಳಿಕ ಅಸ್ಥಾನಾ ಆರೋಪಮುಕ್ತರಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News