ಜಮ್ಮು ಕಾಶ್ಮೀರದಿಂದ 10 ಸಾವಿರ ಅರೆಸೈನಿಕ ಪಡೆ ಸಿಬ್ಬಂದಿಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಕೇಂದ್ರದ ಆದೇಶ

Update: 2020-08-19 17:07 GMT

ಹೊಸದಿಲ್ಲಿ,ಆ.19: ಕೇಂದ್ರಾಡಳಿತ ಪ್ರದೇಶ ಜಮ್ಮುಕಾಶ್ಮೀದಿದ 10 ಸಾವಿರ ಅರೆ ಸೇನಾ ಪಡೆ ಸಿಬ್ಬಂದಿಯನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಕೇಂದ್ರ ಸರಕಾರವು ಬುಧವಾರ ಆದೇಶ ನೀಡಿದೆ.

 ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಬಳಿ ಕೇಂದ್ರಾಡಳಿತ ಪ್ರದೇಶದಲ್ಲಿ ನಿಯೋಜಿತವಾಗಿದ್ದ ಭದ್ರತಾಪಡೆಗಳ ಅತಿ ದೊಡ್ಡ ಹಿಂತೆಗೆತ ಇದಾಗಿದೆ.

    ಜಮ್ಮುಕಾಶ್ಮೀರದಲ್ಲಿ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್)ಗಳನ್ನು ನಿಯೋಜನೆಯ ಬಗ್ಗೆ ಪರಾಮರ್ಶೆ ನಡೆಸಿದ ಬಳಿಕ ಕೇಂದ್ರ ಗೃಹ ಸಚಿವಾಲಯ ಈ ನಿರ್ಧಾರವನ್ನು ಕೈಗೊಂಡಿದೆಯೆಂದು ಅವು ತಿಳಿಸಿವೆ.

   ಕಳೆದ ಮೇನಲ್ಲಿ ಜಮ್ಮುಕಾಶ್ಮೀರದಿಂದ 10 ಸಿಎಪಿಎಫ್ ತುಕಡಿಗಳನ್ನು ಹಿಂತೆಗೆದುಕೊಳ್ಳಲಾಗಿತ್ತು. ಕಳೆದ ಡಿಸೆಂಬರ್‌ನಲ್ಲಿಯೂ ಕಾಶ್ಮೀರದಿಂದ ಸಿಎಪಿಎಫ್‌ನ 72 ಯೂನಿಟ್‌ಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿತ್ತು.

  ಕೇಂದ್ರ ಗೃಹ ಸಚಿವಾಲಯದ ನೂತನ ಆದೇಶದಂತೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ 40 , ಕೇಂದ್ರೀಯ ಕೈಗಾರಿಕಾ ಭದ್ರತಾಪಡೆ (ಸಿಐಎಸ್‌ಎಫ್), ಗಡಿ ಭದ್ರತಾಪಡೆ (ಬಿಎಸ್‌ಎಫ್)ಹಾಗೂ ಸಶಸ್ತ್ರ ಸೀಮಾ ಬಲ್‌ನ ತಲಾ 20 ತುಕಡಿಗಳನ್ನು ಈ ವಾರದೊಳಗೆ ಜಮ್ಮುಕಾಶ್ಮೀರದಿಂದ ಹಿಂತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

   ಈ ಯೂನಿಟ್‌ಗಳನ್ನು ದಿಲ್ಲಿ ಮತ್ತಿತರ ಸ್ಥಳಗಳಿಗೆ ವಿಮಾನ ಮೂಲಕ ಕೊಂಡೊಯ್ಯಲು ಏರ್ಪಾಡು ಮಾಡುವಂತೆ ಸಿಆರ್‌ಪಿಎಫ್‌ಗೆ ಸೂಚನೆ ನೀಡಲಾಗಿದೆ ಎಂದು ಅವು ಹೇಳಿವೆ.

    ಕೇಂದ್ರೀಯ ಸಶಸ್ತ್ರ ಪಡೆಯ ಒಂದು ತುಕಡಿಯಲ್ಲಿ ಸುಮಾರು 100 ಯೋಧರಿರುತ್ತಾರೆ. ಜಮ್ಮುಕಾಶ್ಮೀರದಲ್ಲಿ ಬಂಡಾಯ ದಮನ ಹಾಗೂ ಭಯೋತ್ಪಾದನಾ ನಿಗ್ರಹ ವ್ಯವಸ್ಥೆ ಸುಭದ್ರವಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ಅಲ್ಲಿ ನಿಯೋಜಿತರಾದ ಯೋಧರನ್ನು ವಿಶ್ರಾಂತಿ, ಚೇತರಿಕೆ ಹಾಗೂ ತರಬೇತಿಗಾಗಿ ಹಿಂತೆಗೆದುಕೊಳ್ಳುವ ಅಗತ್ಯವಿದೆ’’ ಎಂದು ಸಿಎಪಿಎಫ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಚಳಿಗಾಲವು ಸಮೀಪಿಸುತ್ತಿರುವುದರಿಂದ, ವಿಪರೀತ ಚಳಿಯಿರುವ ಕಾಶ್ಮೀರ ಕಣಿವೆಯಲ್ಲಿ ಈ ಯೋಧರು ತಾತ್ಕಾಲಿಕವಾಗಿ ನಿರ್ಮಿಸಿರುವ ವಸತಿ ಶಿಬಿರಗಳಲ್ಲಿ ಉಳಿದುಕೊಳ್ಳುವುದು ಅತ್ಯಂತ ಕಠಿಣವಾದೀತು ಎಂದು ಅವರು ತಿಳಿಸಿದ್ದಾರೆ.

  ಹೊಸ ಹಿಂತೆಗೆತದೊಂದಿಗೆ ಜಮ್ಮುಕಾಶ್ಮೀರದಲ್ಲಿ ಇತರ ಕೇಂದ್ರೀಯ ಸಶಸ್ತ್ರ ಪಡೆಗಳನ್ನು ಹೊರತುಪಡಿಸಿ, ಸಿಆರ್‌ಪಿಎಫ್‌ನ ಬಲ ಇನ್ನು 60 ಬೆಟಾಲಿಯನ್‌ಗೆ ಕುಸಿಯಲಿದೆ (ಪ್ರತಿಯೊಂದು ಬೆಟಾಲಿಯನ್‌ನಲ್ಲಿ 1 ಸಾವಿರ ಸಿಬ್ಬಂದಿಯಿರುತ್ತಾರೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News