ಆರೆಸ್ಸೆಸ್ಸನ್ನು ಟೀಕಿಸಿ ವಾಟ್ಸ್ಯಾಪ್ ಸ್ಟೇಟಸ್: ಪತ್ರಿಕೋದ್ಯಮ ವಿದ್ಯಾರ್ಥಿಯ ಬಂಧನ

Update: 2020-08-19 16:57 GMT

ಹೊಸದಿಲ್ಲಿ,ಆ.19: ಆರೆಸ್ಸೆಸ್ಸನ್ನು ಟೀಕಿಸುವ ವಾಟ್ಸ್ಯಾಪ್ ಸ್ಟೇಟಸ್ ಪ್ರಸಾರ ಮಾಡಿದ ಪತ್ರಿಕೋದ್ಯಮದ ಯುವ ವಿದ್ಯಾರ್ಥಿಯೊಬ್ಬನನ್ನು ಉತ್ತರಪ್ರದೇಶ ಪೊಲೀಸರು 12 ತಾಸುಗಳ ಕಾಲ ಬಂಧನದಲ್ಲಿರಿಸಿದ ಘಟನೆ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನದ ರಾತ್ರಿ ನಡೆದಿದೆ.

     ಹೈದರಾಬಾದ್‌ನ ಮೌಲಾನಾ ಆಝಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮದ ಮೊದಲ ವರ್ಷದ ವಿದ್ಯಾರ್ಥಿ ಮುಹಮ್ಮದ್ ಮಿಸ್‌ಬಾಹ್ ಝಫರ್ ಪೊಲೀಸ್ ದೌರ್ಜನ್ಯಕ್ಕೊಳಗಾದ ಯುವಕ. ಆಗಸ್ಟ್ 15ರಂದು ಸಂಜೆ ‘ಸ್ವಾತಂತ್ರ್ಯೋತ್ಸವದ ಸಂದೇಶ’ ಎಂಬ ಫೇಸ್‌ಬುಕ್ ಲೈವ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಕಲೀಂ ತುಮಕೂರು ಅವರು ಭಾಷಣ ನೀಡುವವರಿದ್ದರು. ಈ ಕಾರ್ಯಕ್ರಮಕ್ಕಾಗಿ ‘ಆರೆಸ್ಸೆಸ್ ಸೆ ಆಝಾದಿ ಹಾಗೂ ಹಿಂದುತ್ವ ಗವರ್ನ್‌ಮೆಂಟ್ಸೆ ಆಝಾದಿ’ ಎಂಬ ಹ್ಯಾಶ್‌ಟ್ಯಾಗ್‌ನಡಿ ಟ್ವಿಟರ್ ಅಭಿಯಾನವನ್ನು ಝಫರ್ ವಾಟ್ಸ್ಯಾಪ್ ಸ್ಟೇಟಸ್‌ನಲ್ಲಿ ಪ್ರಸಾರ ಮಾಡಿದ್ದರು.

       ‘‘ಆಗಸ್ಟ್ 15ರ ಮಧ್ಯರಾತ್ರಿ ಮುಂಜಾನೆ 2:20ರ ವೇಳೆಗೆ ಝಫರ್ ನಿವಾಸಕ್ಕೆ ಪೊಲೀಸರು ಆಗಮಿಸಿದ್ದರು. “ಬಾಗಿಲು ತೆರೆದ ನನ್ನ ಸಹೋದರನನ್ನು ಪ್ರಶ್ನಿಸಿದ ಪೊಲೀಸರು ಝಫರ್‌ಗೆ ಆಜಾದಿ ಬೇಕಾದರೆ, ಜೈಲಿಗೆ ಹೋಗಬಹುದು. ಆತನಿಗೆ ನಾವು ಸ್ವಾತಂತ್ರ ಕೊಡುತ್ತೇವೆ” ಎಂದು ಹೇಳಿದರು. ಪೊಲೀಸ್ ಠಾಣೆಗೆ ಕರೆದೊಯ್ಯುವಾಗ,ದಾರಿಯಲ್ಲಿ ಅವರು ತನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿದರು ಹಾಗೂ ಹಲ್ಲೆ ನಡೆಸಿದರು. ‘ನಿನಗೆ ಭಾರತದಲ್ಲಿ ಇಮ್ರಾನ್ ಖಾನ್‌ನ ಕಾನೂನು ಜಾರಿಗೆ ತರಬೇಕೇ?, ನಿನ್ನ ಹಿಂದೆ ಯಾವ ಸಂಘಟನೆಯಿದೆ?’ ಎಂದು ಪ್ರಶ್ನಿಸಿದ್ದರು. “ನಾನು ಕೇವಲ ಸರಕಾರವನ್ನಷ್ಟೇ ಟೀಕಿಸಿದ್ದೇನೆ. ಅದು ದೇಶವಿರೋಧಿಯೆಂದು ನೀವು ಭಾವಿಸುವುದಾದರೆ ಅದು ನಿಮ್ಮ ಸಮಸ್ಯೆಯಷ್ಟೇ” ಎಂದು ತಾನು ಹೇಳಿದ್ದಾಗಿ ಝಫರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

  ಝಫರ್‌ರನ್ನು ಪೊಲೀಸ್ ಠಾಣೆಯಲ್ಲಿ 12 ತಾಸುಗಳ ಕಾಲ ಬಂಧನದಲ್ಲಿರಿಸಿದ್ದರು. ತನ್ನ ವಾಟ್ಸ್ಯಾಪ್ ಪೋಸ್ಟ್‌ಗಾಗಿ ಕ್ಷಮೆಯಾಚಿಸುವಂತೆ ತಿಳಿಸಿದರು. ಆದರೆ ತಾನು ಏನೂ ತಪ್ಪು ಮಾಡದಿರುವಾಗ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲವೆಂದು ಝಫರ್ ತಿಳಿಸಿದರು. ಇದರಿಂದ ಕೆರಳಿದ ಪೊಲೀಸರು, ತನ್ನ ವಿರುದ್ಧ ದೇಶದ್ರೋಹದ ಆರೋಪ ಹೊರಿಸುವುದಾಗಿ ಹಾಗೂ ತನ್ನ ತಂದೆಯ ಆಸ್ತಿ ಜಪ್ತಿ ಮಾಡುವುದಾಗಿ ಬೆದರಿಕೆ ಹಾಕಿದ್ದರೆಂದು ತಿಳಿಸಿದರು.

ಮರುದಿನ ಕ್ರಿಮಿನಲ್ ದಂಡಸಂಹಿತೆಯ 151ನೆ ಸೆಕ್ಷನ್ ಅನ್ವಯ ಜಿಲ್ಲಾ ಮ್ಯಾಜಿಸ್ಟ್ರೇಟರ ಸಮಕ್ಷಮದಲ್ಲಿ ಹಾಜರುಪಡಿಸಿದ ಬಳಿಕವಷ್ಟೇ ತನಗೆ ಮನೆಗೆ ತೆರಳಲು ಅನುಮತಿ ನೀಡಲಾಯಿತೆಂದು ಝಫರ್ ತಿಳಿಸಿದ್ದಾರೆ. ತಾನು ಯಾವುದೇ ಅಪರಾಧವೆಸಗದಿದ್ದರೂ 12 ತಾಸುಗಳ ಕಾಲ ಬಂಧನದಲ್ಲಿಟ್ಟಿರುವುದು ಯಾವ ನ್ಯಾಯ ಎಂದು ಝಫರ್ ನೋವಿನಿಂದ ಪ್ರಶ್ನಿಸಿದ್ದಾರೆ.

ಆದರೆ ಝಫರ್ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲವೆಂದು ಜರ್ವಾಲ್ ರೋಡ್ ಪೊಲೀಸ್ ಠಾಣಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ಆತನ್ನು ಸಾಮಾನ್ಯವಾಗಿ ಪೊಲೀಸ್ ಠಾಣೆಗೆ ಕರೆಯಿಸಿಕೊಳ್ಳಲಾಗಿದೆ ಹಾಗೂ ಭವಿಷ್ಯದಲ್ಲಿ ಜನರ ಭಾವನೆಗಳಿಗೆ ನೋವುಂಟು ಮಾಡಬಾರದೆಂದು ಕಿವಿಮಾತು ಹೇಳಿದ್ದಾಗಿ ಠಾಣಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News