ನಾನು ಕೋರ್ಟ್ ನ ಕರುಣೆ ಬಯಸುವುದಿಲ್ಲ, ಶಿಕ್ಷೆ ಅನುಭವಿಸಲು ಸಿದ್ಧ: ಸುಪ್ರೀಂ ಕೋರ್ಟ್ ಗೆ ಪ್ರಶಾಂತ್ ಭೂಷಣ್

Update: 2020-08-20 14:17 GMT

ಹೊಸದಿಲ್ಲಿ, ಆ.20: “ನನ್ನ ವಿರುದ್ಧದ ತೀರ್ಪಿನಿಂದ ನೋವಾಗಿದೆ. ನನಗೆ ಶಿಕ್ಷೆ ವಿಧಿಸಿದ್ದಕ್ಕೆ ಅಲ್ಲ, ನನ್ನ ಟ್ವೀಟ್‌ನ ಬಗ್ಗೆ ಸಂಪೂರ್ಣ ತಪ್ಪು ಗ್ರಹಿಕೆ ಹೊಂದಿರುವುದಕ್ಕೆ ನೋವಾಗಿದೆ. ಆದ್ದರಿಂದ ಸುಪ್ರೀಂಕೋರ್ಟ್‌ನ ಕ್ಷಮೆ ಕೇಳುವುದಿಲ್ಲ, ಅವರು ನೀಡುವ ಶಿಕ್ಷೆಯನ್ನು ಸಂತೋಷದಿಂದ ಸ್ವೀಕರಿಸುತ್ತೇನೆ” ಎಂದು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ಮುಖ್ಯ ನ್ಯಾಯಾಧೀಶ ಎಸ್‌ಎ ಬೋಬ್ಡೆ ಹಾಗೂ ನ್ಯಾಯಾಂಗದ ವಿರುದ್ಧ ಭೂಷಣ್ ಟ್ವೀಟ್ ಮಾಡಿರುವುದರಿಂದ ನ್ಯಾಯಾಂಗ ನಿಂದನೆ ಎಸಗಿದ್ದಾರೆ ಎಂದು ನ್ಯಾಯಾಲಯ ತೀರ್ಪು ನೀಡಿದ್ದು, ಈ ಪ್ರಕರಣದಲ್ಲಿ ಭೂಷಣ್‌ಗೆ ವಿಧಿಸುವ ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸಲು ಗುರುವಾರ ನಡೆದ ಕಲಾಪದಲ್ಲಿ ಭೂಷಣ್ ತಾನು ನಿರ್ದೋಷಿ ಎಂದು ವಾದ ಮಂಡಿಸಿದರು. “ನನ್ನ ಪ್ರಾಮಾಣಿಕ ಅನಿಸಿಕೆಯನ್ನು ಟ್ವೀಟ್ ಮೂಲಕ ಹಂಚಿಕೊಂಡಿರುವುದರಿಂದ ಕ್ಷಮೆ ಯಾಚಿಸುವುದಿಲ್ಲ. ‘ನ್ಯಾಯಾಂಗವನ್ನು ಟೀಕಿಸುವ ಮೂಲಕ ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿಯುವ ತನ್ನ ಕರ್ತವ್ಯವನ್ನು ನಿರ್ವಹಿಸಿದ್ದು ಇದನ್ನು ನ್ಯಾಯಾಲಯ ತಪ್ಪಾಗಿ ಗ್ರಹಿಸಿದೆ. ಈ ಬಗ್ಗೆ ನೋವಾಗಿದೆ’ ಎಂದು ಭೂಷಣ್ ಹೇಳಿದ್ದಾರೆ.

ಕಳೆದ ಸುಮಾರು 3 ದಶಕಗಳಿಂದ ಓರ್ವ ವಿನಮ್ರ ಕಾವಲುಗಾರನಾಗಿ ವೈಯಕ್ತಿಕ ಅಥವಾ ವೃತ್ತಿಪರ ನೆಲೆಯಲ್ಲಿ ನ್ಯಾಯಾಲಯದ ಘನತೆಯನ್ನು ಎತ್ತಿ ಹಿಡಿಯಲು ಪ್ರಯತ್ನಿಸಿದ್ದೇನೆ. ನಮ್ಮ ಗಣರಾಜ್ಯದ ಇತಿಹಾಸದ ಈ ಸಂದರ್ಭದಲ್ಲಿ , ನನ್ನ ಅತ್ಯುನ್ನತ ಕರ್ತವ್ಯವೆಂದು ಪರಿಗಣಿಸಿದ್ದನ್ನು ಟ್ವೀಟ್‌ನ ಮೂಲಕ ಪ್ರಸ್ತುತ ಪಡಿಸಿದ್ದೇನೆ. ನನ್ನ ಟ್ವೀಟ್‌ನ ಹಿಂದೆ ಇರುವ ಉದ್ದೇಶವನ್ನು ಗಮನಿಸದೆ ನ್ಯಾಯಾಲಯ ತಪ್ಪಿತಸ್ತನೆಂದು ಘೋಷಿಸಿದೆ. ನ್ಯಾಯದ ಆಡಳಿತದ ಮೇಲೆ ದುರುದ್ದೇಶಪೂರಿತ, ಗಂಭೀರ, ಲೆಕ್ಕಾಚಾರದ ದಾಳಿ ನಡೆಸಿದ್ದಕ್ಕೆ ಈ ಶಿಕ್ಷೆ ಎಂಬ ನ್ಯಾಯಾಲಯದ ಹೇಳಿಕೆಯಿಂದ ಆಘಾತವಾಗಿದೆ. ಅಂತಹ ದಾಳಿ ನಡೆಸಲು ನಾನು ಉದ್ದೇಶಿಸಿದ್ದೇನೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲದೆ ನ್ಯಾಯಾಲಯ ಈ ತೀರ್ಮಾನಕ್ಕೆ ಬಂದಿರುವುದರಿಂದ ಆಘಾತಗೊಂಡಿದ್ದೇನೆ. ಸ್ವಯಂ ಪ್ರಕರಣ ದಾಖಲಿಸಿಕೊಂಡು ನನಗೆ ನೋಟಿಸ್ ನೀಡಲು ಆಧಾರವಾದ ದೂರಿನ ಪ್ರತಿಯನ್ನು ನನಗೆ ಕಳುಹಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಭಾವಿಸಿರುವುದಕ್ಕೆ ನಿರಾಶೆಗೊಂಡಿದ್ದೇನೆ” ಎಂದು ಭೂಷಣ್ ಹೇಳಿದ್ದಾರೆ.

“ಆದ್ದರಿಂದ, ಮಹಾತ್ಮಾ ಗಾಂಧೀಜಿ ತಮ್ಮ ವಿಚಾರಣೆ ಸಂದರ್ಭ ಆಡಿದ್ದ ‘ಕ್ಷಮಿಸಿ ಬಿಡಿ ಎಂದು ಕೋರುವುದಿಲ್ಲ, ನನ್ನ ಬಗ್ಗೆ ಔದಾರ್ಯತೆಯಿಂದ ನಡೆದುಕೊಳ್ಳಿ ಎಂದು ಕೇಳುವುದಿಲ್ಲ’ ಎಂಬ ಮಾತನ್ನೇ ಇಲ್ಲಿ ವಿನಮ್ರತೆಯಿಂದ ಉಲ್ಲೇಖಿಸುತ್ತಿದ್ದೇನೆ. ಮತ್ತು ಓರ್ವ ನಾಗರಿಕನಾಗಿ ನನ್ನ ಕರ್ತವ್ಯ ಎಂದು ನಾನು ಭಾವಿಸಿದ, ಆದರೆ ಅಪರಾಧವೆಂದು ನ್ಯಾಯಾಲಯ ಪರಿಗಣಿಸಿದ ಕಾರಣಕ್ಕೆ ನನ್ನ ಮೇಲೆ ವಿಧಿಸಲಾಗುವ ಶಿಕ್ಷೆಯನ್ನು ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ” ಎಂದು ಭೂಷಣ್ ಹೇಳಿದ್ದಾರೆ.

ನ್ಯಾಯಾಲಯದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಅರ್ಜಿ ಸಲ್ಲಿಸಲಿದ್ದು, ಅದುವರೆಗೆ ಶಿಕ್ಷೆಯ ಪ್ರಮಾಣ ಘೋಷಿಸುವ ಕಲಾಪವನ್ನು ನಡೆಸಬಾರದು ಎಂದು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಸುಪ್ರೀಂಕೋರ್ಟ್‌ಗೆ ಬುಧವಾರ ಅರ್ಜಿ ಸಲ್ಲಿಸಿದ್ದರು.

ಪ್ರಜಾಪ್ರಭುತ್ವದಲ್ಲಿ ಮುಕ್ತ ಟೀಕೆ ಅಗತ್ಯ

ನ್ಯಾಯಾಲಯವನ್ನು ಟೀಕಿಸಿ ಮಾಡಿರುವ ತನ್ನ ಟ್ವೀಟ್‌ನಲ್ಲಿ ಪ್ರಾಮಾಣಿಕ ವಿಚಾರ ಹಂಚಿಕೊಂಡಿದ್ದೇನೆ. ಯಾವುದೇ ಸಂಸ್ಥೆಯ ವಿರುದ್ಧ ಮುಕ್ತವಾಗಿ ಟೀಕೆ ಮಾಡುವುದು ಪ್ರಜಾಪ್ರಭುತ್ವದ ಮತ್ತು ಸಾಂವಿಧಾನಿಕ ವ್ಯವಸ್ಥೆಯ ಹಿತದೃಷ್ಟಿಯಿಂದ ಅಗತ್ಯವಾಗಿದೆ. ಅಭಿಪ್ರಾಯ ವ್ಯಕ್ತಪಡಿಸಲು ವಿಫಲವಾದರೆ (ವಿಶೇಷವಾಗಿ ನ್ಯಾಯಾಲಯದ ಅಧಿಕಾರಿಯಾದ ತನ್ನಂತವರು) ಅದು ಕರ್ತವ್ಯಲೋಪವಾಗುತ್ತದೆ ಎಂದು ಭೂಷಣ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News