×
Ad

ಸ್ವಚ್ಛ ಸರ್ವೇಕ್ಷಣ ಸಮೀಕ್ಷೆ: ಸತತ 4ನೇ ಬಾರಿ ನಂ.1 ಸ್ಥಾನ ಉಳಿಸಿಕೊಂಡ ಇಂದೋರ್

Update: 2020-08-20 13:29 IST

 ಹೊಸದಿಲ್ಲಿ,ಆ.20: ಐದನೇ ವರ್ಷದ ‘ಸ್ವಚ್ಛ ಸರ್ವೇಕ್ಷಣ್’ನ ಫಲಿತಾಂಶಗಳನ್ನು ಪ್ರಕಟಿಸಲಾಗಿದ್ದು,ಮಧ್ಯಪ್ರದೇಶದ ಇಂದೋರ್ ಸತತ ನಾಲ್ಕನೇ ವರ್ಷವೂ ಭಾರತದ ಅತ್ಯಂತ ಸ್ವಚ್ಛ ನಗರ ಎಂಬ ಗೌರವವನ್ನು ತನ್ನದಾಗಿಸಿಕೊಂಡಿದೆ. ಗುಜರಾತಿನ ಸೂರತ್ ಎರಡನೇ ಮತ್ತು ಮಹಾರಾಷ್ಟ್ರದ ನವಿ ಮುಂಬೈ ಮೂರನೇ ಸ್ಥಾನವನ್ನು ಪಡೆದಿವೆ.

 40 ಲ.ಕ್ಕೂ ಅಧಿಕ ಜನಸಂಖ್ಯೆಯ ನಗರಗಳ ಪೈಕಿ ಅಹ್ಮದಾಬಾದ್ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೆ,10 ಲಕ್ಷದಿಂದ 40ಲಕ್ಷದವರೆಗೆ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ವಿಜಯವಾಡಾಕ್ಕೆ ಈ ಗೌರವ ಲಭಿಸಿದೆ. ಜಲಂಧರ್‌ನ ದಂಡು ಪ್ರದೇಶವು ಭಾರತದ ಅತ್ಯಂತ ಸ್ವಚ್ಛ ದಂಡುಪ್ರದೇಶ ಮಂಡಳಿ ಪ್ರಶಸ್ತಿಗೆ ಪಾತ್ರವಾಗಿದ್ದರೆ,‘ಅತ್ಯುತ್ತಮ ಗಂಗಾ ಪಟ್ಟಣ’ ಪ್ರಶಸ್ತಿ ವಾರಣಾಸಿಯ ಪಾಲಾಗಿದೆ.

ಒಂದು ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯ ವರ್ಗದಲ್ಲಿ ನಾಗರಿಕರ ಸಹಭಾಗಿತ್ವದ ಹಿನ್ನೆಲೆಯಲ್ಲಿ ಅತ್ಯುತ್ತಮ ನಗರ ಪ್ರಶಸ್ತಿಯು ಉತ್ತರ ಪ್ರದೇಶದ ಶಹಜಹಾನ್‌ಪುರಕ್ಕೆ ದೊರಕಿದ್ದರೆ,ಈ ವಿಭಾಗದಲ್ಲಿ ಒಂದು ಲಕ್ಷಕ್ಕೂ ಕಡಿಮೆ ಜನಸಂಖ್ಯೆ ನಗರಗಳಿಗೆ ನೀಡುವ ಪ್ರಶಸ್ತಿಯನ್ನು ಉತ್ತರಾಖಂಡದ ನಂದಪ್ರಯಾಗ ಪಡೆದುಕೊಂಡಿದೆ.

ಛತ್ತೀಸ್‌ಗಡದ ಪಿಲಾಯಿ ಅತ್ಯುತ್ತಮ ಸ್ವ ಸುಸ್ಥಿರ ನಗರ ಪ್ರಶಸ್ತಿಯನ್ನು ಪಡೆದಿದ್ದರೆ,ಮಧ್ಯಪ್ರದೇಶದ ಬುರ್ಹಾನ್‌ಪುರವನ್ನು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಣ್ಣ ನಗರ ಎಂದು ಹೆಸರಿಸಲಾಗಿದೆ. ಹೊಸದಿಲ್ಲಿ ಮಹಾನಗರ ಪಾಲಿಕೆಯು ಅತ್ಯಂತ ಸ್ವಚ್ಛ ರಾಜಧಾನಿಯ ಮುಕುಟವನ್ನು ತನ್ನ ಮುಡಿಗೇರಿಸಿಕೊಂಡಿದ್ದರೆ,ಭೋಪಾಲ ಅತ್ಯುತ್ತಮ ಸ್ವ ಸುಸ್ಥಿರ ರಾಜಧಾನಿ ನಗರ ಪ್ರಶಸ್ತಿಗೆ ಪಾತ್ರವಾಗಿದೆ. ಒಟ್ಟಾರೆ ಸಾಧನೆಯ ಆಧಾರದಲ್ಲಿ ಅತ್ಯುತ್ತಮ ರಾಜ್ಯಗಳನ್ನು 100 ಮತ್ತು ಹೆಚ್ಚಿನ ನಗರ ಸ್ಥಳೀಯ ಸಂಸ್ಥೆಗಳನ್ನು ಹೊಂದಿರುವ ಹಾಗೂ 100ಕ್ಕೂ ಕಡಿಮೆ ನಗರ ಸ್ಥಳೀಯ ಸಂಸ್ಥೆಗಳನ್ನು ಹೊಂದಿರುವ ರಾಜ್ಯಗಳೆಂದು ವಿಭಜಿಸಲಾಗಿದ್ದು,ಮೊದಲ ವರ್ಗದಲ್ಲಿ ಛತ್ತೀಸ್‌ಗಡ ಸತತ ಎರಡನೇ ವರ್ಷ ಪ್ರಶಸ್ತಿಗೆ ಪಾತ್ರವಾಗಿದ್ದರೆ,ಎರಡನೇ ವರ್ಗದಲ್ಲಿ ಜಾರ್ಖಂಡ್ ಗೆಲುವನ್ನು ತನ್ನದಾಗಿಸಿಕೊಂಡಿದೆ.

 ‘ಸ್ವಚ್ಛ ಮಹೋತ್ಸವ್’ ವರ್ಚುವಲ್ ಕಾರ್ಯಕ್ರಮದಲ್ಲಿ ಕಾರಣಾಂತರಗಳಿಂದ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ 129 ನಗರಗಳ ಅಧಿಕಾರಿಗಳಿಗೆ ಪ್ರಶಸ್ತಿಗಳನ್ನು ಪ್ರದಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News