ಭಾರತದಲ್ಲಿ ಕ್ಯಾನ್ಸರ್ ಪ್ರಕರಣ 12% ಹೆಚ್ಚಳ ಸಾಧ್ಯತೆ: ಎನ್‌ಸಿಆರ್‌ಪಿ ವರದಿ

Update: 2020-08-20 16:19 GMT

ಹೊಸದಿಲ್ಲಿ, ಆ.20: ಭಾರತದಲ್ಲಿ 2025ರ ವೇಳೆಗೆ ಕ್ಯಾನ್ಸರ್ ರೋಗದ ಪ್ರಮಾಣದಲ್ಲಿ 12% ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಯೋಜನೆ(ಎನ್‌ಸಿಆರ್‌ಪಿ)ಯ ವರದಿ ತಿಳಿಸಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಮತ್ತು ಬೆಂಗಳೂರಿನ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಇನ್‌ಫಾರ್ಮೆಟಿಕ್ಸ್ ಆ್ಯಂಡ್ ರಿಸರ್ಚ್(ಎನ್‌ಸಿಡಿಐಆರ್) ಬಿಡುಗಡೆ ಮಾಡಿರುವ ವರದಿಯಲ್ಲಿ 2020ರಲ್ಲಿ ದೇಶದಲ್ಲಿ 13.9 ಲಕ್ಷ ಕ್ಯಾನ್ಸರ್ ಪ್ರಕರಣ ದಾಖಲಾಗಬಹುದು ಎಂದು ಅಂದಾಜಿಸಿದ್ದು, ಈಗಿನ ಪ್ರವೃತ್ತಿಯೇ ಮುಂದುವರಿದರೆ 2025ರ ಸಂದರ್ಭ 12% ಅಂದರೆ 15.7 ಲಕ್ಷದಷ್ಟು ಹೆಚ್ಚಳವಾಗಬಹುದು ಎಂದು ತಿಳಿಸಿದೆ.

ಜನಸಂಖ್ಯೆಯ ಆಧಾರದ 28 ಕ್ಯಾನ್ಸರ್ ನೋಂದಣಿ ದಾಖಲೆ, ಆಸ್ಪತ್ರೆ ಮೂಲದ 58 ಕ್ಯಾನ್ಸರ್ ನೋಂದಣಿಯ ಅಂಕಿಅಂಶ ಆಧರಿಸಿ ವರದಿ ತಯಾರಿಸಲಾಗಿದೆ. ಕ್ಯಾನ್ಸರ್‌ಗೆ ಕಾರಣವಾಗುವ ಅಂಶಗಳಲ್ಲಿ ತಂಬಾಕು ಉತ್ಪನ್ನಗಳ ಪ್ರಮಾಣ 27.1%(3.7 ಲಕ್ಷ)ವಾಗಿದೆ. ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ನ ಪ್ರಕರಣ 2 ಲಕ್ಷ, ಗರ್ಭಕೋಶದ ಕ್ಯಾನ್ಸರ್ 0.75 ಲಕ್ಷವಿದ್ದರೆ, ಪುರುಷ ಮತ್ತು ಮಹಿಳೆಯರಲ್ಲಿ ಜೀರ್ಣಾಂಗ ವ್ಯೂಹದ ಕ್ಯಾನ್ಸರ್ 2.7 ಲಕ್ಷವಾಗಿದೆ. ಪುರುಷರಿಗೆ ಕ್ಯಾನ್ಸರ್ ಸಂಭವನೀಯತೆಯ ಪ್ರಮಾಣ ಐಜ್ವಾಲ್ ಜಿಲ್ಲೆಯಲ್ಲಿ 299.4 ಆಗಿದ್ದರೆ, ಓಸ್ಮಾನಾಬಾದ್ ಮತ್ತು ಬೀಡ್ ಜಿಲ್ಲೆಯಲ್ಲಿ 39.5 ಆಗಿದೆ(ಪ್ರತೀ 1 ಲಕ್ಷ ಜನಸಂಖ್ಯೆಯ ಆಧಾರ). ಇದೇ ರೀತಿ ಮಹಿಳೆಯರಿಗೆ ಕ್ಯಾನ್ಸರ್ ಸಂಭವನೀಯತೆಯ ಪ್ರಮಾಣ ಪಾಪೂಂಪರೆ ಜಿಲ್ಲೆಯಲ್ಲಿ 219.8, ಓಸ್ಮಾನಾಬಾದ್ ಮತ್ತು ಬೀಡ್ ಜಿಲ್ಲೆಯಲ್ಲಿ 49.4 ಆಗಿದೆ(ಪ್ರತೀ 1 ಲಕ್ಷ ಜನಸಂಖ್ಯೆಯ ಆಧಾರ). ಈಶಾನ್ಯ ಪ್ರದೇಶದಲ್ಲಿ ಪುರುಷರಲ್ಲಿ ತಂಬಾಕಿನ ಚಟದಿಂದ ಕ್ಯಾನ್ಸರ್ ಬರುವ ಸಂಭವ ಅಧಿಕವಾಗಿದೆ. ಪುರುಷರಲ್ಲಿ ಶ್ವಾಸಕೋಶ, ಬಾಯಿ, ಹೊಟ್ಟೆ ಮತ್ತು ಅನ್ನನಾಳದ ಕ್ಯಾನ್ಸರ್ ಹೆಚ್ಚು ಬಾಧಿಸಿದರೆ, ಮಹಿಳೆಯರಲ್ಲಿ ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ ಪ್ರಕರಣ ಹೆಚ್ಚು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News