ಮಹಾ ಘಟಬಂಧನ್‌ ತೊರೆದ ಜಿತನ್ ರಾಮ್ ಮಾಂಝಿ ಪಕ್ಷ

Update: 2020-08-20 16:23 GMT

ಪಾಟ್ನ, ಆ.20: ಬಿಹಾರದಲ್ಲಿ ವಿಪಕ್ಷಗಳ ಒಕ್ಕೂಟದಿಂದ ರಾಜ್ಯದ ಮಾಜಿ ಮುಖ್ಯಮಂತ್ರಿ ಜೀತನ್‌ರಾಮ್ ಮಾಂಝಿಯ ಪಕ್ಷ ಹಿಂದುಸ್ತಾನ್ ಅವಾಮ್ ಮೋರ್ಛಾ(ಜಾತ್ಯಾತೀತ) ಹೊರಬಂದಿದ್ದು, ಮಹಾ ಘಟಬಂಧನ್‌ಗೆ ಹಿನ್ನಡೆಯಾಗಿದೆ.

ಮಾಂಝಿಯ ನಿವಾಸದಲ್ಲಿ ಗುರುವಾರ ನಡೆದ ಪಕ್ಷದ ಉನ್ನತ ಸಮಿತಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಪಕ್ಷದ ವಕ್ತಾರ ದಾನಿಶ್ ರಿಝ್ವಾನ್ ಹೇಳಿದ್ದಾರೆ. ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳ, ಕಾಂಗ್ರೆಸ್, ಉಪೇಂದ್ರ ಕುಶ್ವಾಹಾರ ರಾಷ್ಟ್ರೀಯ ಲೋಕಸಮತಾ ಪಕ್ಷ, ಮುಕೇಶ್ ಸಾಹ್ನಿ ನೇತೃತ್ವದ ವಿಕಾಸಶೀಲ ಇನ್ಸಾನ್ ಪಕ್ಷ ಹಾಗೂ ಜೀತನ್‌ರಾಮ್ ಮಾಂಝಿಯ ಪಕ್ಷ ಸೇರಿಕೊಂಡು ಮಹಾಘಟಬಂಧನ್ ರಚಿಸಿದ್ದವು.

ಆದರೆ ವಿಪಕ್ಷಗಳ ಒಕ್ಕೂಟದ ಸಮರ್ಪಕ ಕಾರ್ಯನಿರ್ವಹಣೆಗೆ ಸಮನ್ವಯ ಸಮಿತಿ ರಚನೆ ಪ್ರಕ್ರಿಯೆ ಆರ್‌ಜೆಡಿಯಿಂದ ವಿಫಲವಾಗಿದೆ. ಈಗ ಒಕ್ಕೂಟದ ಸಹಪಕ್ಷಗಳ ಮಾತುಗಳನ್ನು ಆಲಿಸದ ಮುಖಂಡರು, ಅಧಿಕಾರಕ್ಕೆ ಬಂದ ಮೇಲೆ ಕೇಳಬಹುದೇ? ಎಂದು ರಿಝ್ವಾನ್ ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದಿದ್ದ ಸಭೆಯಲ್ಲಿ ಸಮನ್ವಯ ಸಮಿತಿಯನ್ನು ವಾರದೊಳಗೆ ರಚಿಸಬೇಕೆಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದರು. ಆದರೆ ಸಮಿತಿ ರಚನೆಯಾಗಿಲ್ಲ ಎಂದವರು ಅಸಮಾಧಾನ ವ್ಯಕ್ತಪಡಿಸಿದರು. ತೇಜಸ್ವಿ ಯಾದವ್ ಆರ್‌ಜೆಡಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಆರ್‌ಜೆಡಿ ಘೋಷಿಸಿರುವ ಬಗ್ಗೆ ಒಕ್ಕೂಟದಲ್ಲಿ ಅಸಮಾಧಾನವಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News