ಐಟಿ ಸ್ಥಾಯಿ ಸಮಿತಿ ಅಧ್ಯಕ್ಷತೆಯಿಂದ ತರೂರ್ ವಜಾ ಕೋರಿ ಸ್ಪೀಕರ್‌ಗೆ ಪತ್ರ

Update: 2020-08-20 16:26 GMT

ಹೊಸದಿಲ್ಲಿ, ಆ.20: ಫೇಸ್‌ಬುಕ್‌ನ ಭಾರತ ವಿಭಾಗದ ಅಧಿಕಾರಿಗಳು ಬಿಜೆಪಿ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ವಿಚಾರಣೆಗೆ ಹಾಜರಾಗುವಂತೆ ಫೇಸ್‌ಬುಕ್ ಅಧಿಕಾರಿಗಳಿಗೆ ಸಮನ್ಸ್ ನೀಡಲಾಗುವುದು ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್‌ರನ್ನು ಮಾಹಿತಿ ತಂತ್ರಜ್ಞಾನ ಸ್ಥಾಯಿ ಸಮಿತಿ ಅಧ್ಯಕ್ಷತೆಯಿಂದ ವಜಾಗೊಳಿಸಬೇಕು ಎಂದು ಬಿಜೆಪಿಯ ಇಬ್ಬರು ಸಂಸದರು ಲೋಕಸಭೆಯ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ.

ಸಂಸತ್ತಿನ ಸ್ಥಾಯಿ ಸಮಿತಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧಾರಕ್ಕೆ ಬಂದ ಬಳಿಕವೇ ಆ ಬಗ್ಗೆ ಸಾರ್ವಜನಿಕ ಹೇಳಿಕೆ ನೀಡಬೇಕು ಎಂಬ ನಿಯಮವಿದೆ. ಆದರೆ ಶಶಿ ತರೂರ್ ಈ ನಿಯಮ ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಸಂಸದರಾದ ನಿಶಿಕಾಂತ್ ದುಬೆ ಮತ್ತು ರಾಜ್ಯವರ್ಧನ ಸಿಂಗ್ ರಾಠೋಡ್ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.

ವಿದೇಶಿ ಉಚ್ಛಾರಣೆಯಲ್ಲಿ ಇಂಗ್ಲಿಷ್ ಮಾತಾಡಿದ ಮಾತ್ರಕ್ಕೆ , ತನ್ನ ಸ್ವಂತದ ರಾಜಕೀಯ ಮಹಾತ್ವಾಕಾಂಕ್ಷೆಯ ಉದ್ದೇಶದಿಂದ ನಮ್ಮ ಸಂಸದೀಯ ಸಂಸ್ಥೆ/ ಸಮಿತಿಗಳ ಮಹತ್ವವನ್ನು ಕಡೆಗಣಿಸಲು ಯಾವುದೇ ವ್ಯಕ್ತಿಗೆ ಅವಕಾಶವಿಲ್ಲ. ಅಲ್ಲದೆ ಬ್ರಿಟಿಷ್ ಸಂಸತ್ತನ್ನು ಉಲ್ಲೇಖಿಸಿ ನಮ್ಮ ಸಂವಿಧಾನವನ್ನು ನಿಂದನೆ ಮಾಡಿರುವ ಹಿನ್ನೆಲೆಯಲ್ಲಿ ಶಶಿ ಥರೂರ್ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡುವಂತೆ ಸ್ಪೀಕರ್‌ಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ದುಬೆ ಹೇಳಿದ್ದಾರೆ. ಈ ಮಧ್ಯೆ, ನಿಶಿಕಾಂತ್ ದುಬೆ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡುವಂತೆ ಶಶಿ ಥರೂರ್ ಅರ್ಜಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News