ಬಾಲಕಿ ಹೂ ಕಿತ್ತ ಕಾರಣ ಗ್ರಾಮದ 40 ದಲಿತ ಕುಟುಂಬಗಳಿಗೆ ಮೇಲ್ಜಾತಿಯವರಿಂದ ಬಹಿಷ್ಕಾರ

Update: 2020-08-21 10:41 GMT
Photo: indianexpress.com

ಭುಬನೇಶ್ವರ್: ದಲಿತ ಸಮುದಾಯಕ್ಕೆ ಸೇರಿದ 15 ವರ್ಷದ ಬಾಲಕಿಯೊಬ್ಬಳು ಮೇಲ್ಜಾತಿಯ ಕುಟುಂಬದ ಹಿತ್ತಲಿನಲ್ಲಿದ್ದ ಹೂಗಳನ್ನು ಕಿತ್ತ ಕಾರಣ ಗ್ರಾಮದ 40 ದಲಿತ ಕುಟುಂಬಗಳಿಗೆ ಮೇಲ್ಜಾತಿಯವರು ಬಹಿಷ್ಕಾರ ಹಾಕಿದ ಘಟನೆ ಒಡಿಶಾದ ಧೇನ್ಕಮಲ್ ಜಿಲ್ಲೆಯ ಕಂಟಿಯೊ ಕಟೇನಿ ಗ್ರಾಮದಿಂದ ವರದಿಯಾಗಿದೆ. ಘಟನೆ ಎರಡು ತಿಂಗಳ ಹಿಂದೆ ನಡೆದಿತ್ತೆನ್ನಲಾಗಿದ್ದು, ಕಳೆದೆರಡು ವಾರಗಳಿಂದ ದಲಿತ ಕುಟುಂಬಗಳು ಬಹಿಷ್ಕಾರಕ್ಕೊಳಗಾಗಿವೆ.

“ವಿವಾದ ಇತ್ಯರ್ಥವಾಗಲೆಂದು ನಾವು ತಕ್ಷಣ ಕ್ಷಮೆಯಾಚಿಸಿದ್ದೆವು. ಆದರೆ ನಂತರ ಹಲವಾರು ಸಭೆಗಳು ನಡೆದು ಅವರು ನಮ್ಮನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ನಮ್ಮ ಜತೆ ಯಾರಿಗೂ ಮಾತನಾಡಲು ಅವಕಾಶ ನೀಡಲಾಗುತ್ತಿಲ್ಲ, ಗ್ರಾಮದಲ್ಲಿ ನಡೆಯುವ ಯಾವುದೇ ಸಮಾರಂಭದಲ್ಲೂ ಭಾಗವಹಿಸಲು ಅನುಮತಿಯಿಲ್ಲ” ಎಂದು ಬಾಲಕಿಯ ತಂದೆ ಹೇಳಿದ್ದಾರೆ.

ಹತ್ತಿರದ ರೇಷನ್ ಅಂಗಡಿಗಳಿಂದ ಅಗತ್ಯ ವಸ್ತುಗಳನ್ನೂ ಖರೀದಿಸಲು ಈ ದಲಿತ ಕುಟುಂಬಗಳಿಗೆ  ಅವಕಾಶ ನೀಡಲಾಗುತ್ತಿಲ್ಲ. “ನಾವು ಪ್ರತಿ ದಿನ 5 ಕಿಮೀ ನಡೆದು ಅಗತ್ಯ  ವಸ್ತುಗಳನ್ನು ಖರೀದಿಸಬೇಕಿದೆ. ಗ್ರಾಮಸ್ಥರು ನಮ್ಮ ಜತೆ ಮಾತನಾಡುವುದನ್ನೂ ನಿಲ್ಲಿಸಿದ್ದಾರೆ'' ಎಂದು ಬಹಿಷ್ಕಾರಕ್ಕೊಳಗಾಗಿರುವ ಕುಟುಂಬಗಳ ಸದಸ್ಯರು ಹೇಳುತ್ತಾರೆ.

ಆಗಸ್ಟ್ 17ರಂದು  ಸಂತ್ರಸ್ತ ಕುಟುಂಬಗಳು ಜಿಲ್ಲಾಡಳಿತ ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ಹಲವು ಮನವಿಗಳನ್ನು ಸಲ್ಲಿಸಿವೆ. ಮಕ್ಕಳಿಗೆ ಸರಕಾರಿ ಶಾಲೆಗೆ ಹೋಗಲೂ ಬಿಡುತ್ತಿಲ್ಲ, ಶಾಲೆಯ ದಲಿತ ಶಿಕ್ಷಕರಿಗೆ ವರ್ಗಾವಣೆ ಪಡೆದುಕೊಳ್ಳುವಂತೆ ಒತ್ತಾಯಿಸಲಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.

ಆದರೆ ಗ್ರಾಮದ ಸರಪಂಚ  ಆರೋಪಗಳನ್ನು ನಿರಾಕರಿಸಿದ್ದು ಆದರೆ ಇತರ ಗ್ರಾಮಸ್ಥರಿಗೆ ದಲಿತರ ಜತೆ ಮಾತನಾಡದಂತೆ ಹೇಳಲಾಗಿದೆ ಎಂದು ಒಪ್ಪುತ್ತಾರೆ.

ಈ ಸಮಸ್ಯೆಯನ್ನು ಶಾಂತಿ ಸಭೆ ನಡೆಸಿ ಇತ್ಯರ್ಥಪಡಿಸಲು ಶ್ರಮಿಸುವುದಾಗಿ ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News