ಕಪ್ಪು ಸಮುದ್ರದಲ್ಲಿ ಭಾರೀ ಪ್ರಮಾಣದ ನೈಸರ್ಗಿಕ ಅನಿಲ ಪತ್ತೆಹಚ್ಚಿದ ಟರ್ಕಿ

Update: 2020-08-21 15:44 GMT

ಲಂಡನ್, ಆ. 21: ಟರ್ಕಿಯು ಕಪ್ಪು ಸಮುದ್ರದಲ್ಲಿ ಬೃಹತ್ ಪ್ರಮಾಣದ ನೈಸರ್ಗಿಕ ಅನಿಲ ಸಂಪನ್ಮೂಲಗಳನ್ನು ಪತ್ತೆಹಚ್ಚಿದೆ ಎಂದು ಟರ್ಕಿಯ ಎರಡು ಮೂಲಗಳು ತಿಳಿಸಿವೆ. ಈ ಅನಿಲವನ್ನು ವಾಣಿಜ್ಯ ಉದ್ದೇಶಕ್ಕಾಗಿ ಹೊರದೆಗೆಯುವುದು ಸಾಧ್ಯವಾದರೆ, ಟರ್ಕಿಯು ಇಂಧನಕ್ಕಾಗಿ ಇತರ ದೇಶಗಳನ್ನು ಅವಲಂಬಿಸುವುದು ತಪ್ಪುತ್ತದೆ.

ಇಂದಿನಿಂದ ಟರ್ಕಿಯ ಹೊಸ ಶಕೆ ಆರಂಭವಾಗುತ್ತದೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಹೇಳಿದ್ದಾರೆ. ಇದರ ಬೆನ್ನಿಗೇ, ಟರ್ಕಿಯ ಇಂಧನ ಕಂಪೆನಿಗಳ ಶೇರುಗಳ ಮೌಲ್ಯದಲ್ಲಿ ಏರಿಕೆಯಾಗಿದೆ ಹಾಗೂ ದೇಶದ ಕರೆನ್ಸಿ ಲಿರಾದ ಮೌಲ್ಯ ಈ ವಾರದ ದಾಖಲೆಯ ಕುಸಿತದಿಂದ ಮೇಲಕ್ಕೆ ಏರಿದೆ.

ಪತ್ತೆಯಾದ ನೈಸರ್ಗಿಕ ಅನಿಲವು ಟರ್ಕಿಯ ಇಂಧನ ಅವಶ್ಯಕತೆಗಳನ್ನು 20 ವರ್ಷಗಳವರೆಗೆ ಪೂರೈಸಬಹುದಾಗಿದೆ ಎಂದು ಮೂಲವೊಂದು ತಿಳಿಸಿದೆ.

ದೇಶದ ಪಶ್ಚಿಮ ಭಾಗದಲ್ಲಿರುವ ಕಪ್ಪು ಸಮುದ್ರದ ಕರಾವಳಿಯಿಂದ ಉತ್ತರಕ್ಕೆ ಸುಮಾರು 100 ನಾಟಿಕಲ್ ಮೈಲಿ ದೂರದಲ್ಲಿರುವ ಟೂನಾ-1 ಎಂಬ ಶೋಧ ವಲಯದಲ್ಲಿ ದೇಶದ ತೈಲಬಾವಿ ಕೊರೆಯುವ ಹಡಗು ‘ಫತಿಹ್’ ಜುಲೈ ಕೊನೆಯ ಭಾಗದಿಂದ ಕಾರ್ಯನಿರತವಾಗಿದೆ.

‘‘ಟೂನಾ-1 ಬಾವಿಯಲ್ಲಿ ನೈಸರ್ಗಿಕ ಅನಿಲವಿದೆ’’ ಎಂದು ಮೂಲ ತಿಳಿಸಿದೆ. ‘‘ನೈಸರ್ಗಿಕ ಅನಿಲ ನಿಕ್ಷೇಪದ ಪ್ರಮಾಣ 26 ಲಕ್ಷ ಕೋಟಿ ಕ್ಯೂಬಿಕ್ ಅಡಿ ಇರಬಹುದೆಂದು ಅಂದಾಜಿಸಲಾಗಿದೆ ಹಾಗೂ ಅದು ಟರ್ಕಿಯ ಇಂಧನ ಅವಶ್ಯಕತೆಗಳನ್ನು ಮುಂದಿನ 20 ವರ್ಷಗಳವರೆಗೆ ಪೂರೈಸಬಲ್ಲದು’’ ಎಂದು ಅದು ಹೇಳಿದೆ.

ಆದರೆ, ಉತ್ಪಾದನೆ ಆರಂಭಿಸಲು ಏಳರಿಂದ 10 ವರ್ಷಗಳು ಬೇಕಾಗಬಹುದು ಹಾಗೂ 2ರಿಂದ 3 ಬಿಲಿಯ ಡಾಲರ್ (ಸುಮಾರು 22,470 ಕೋಟಿ ರೂಪಾಯಿ) ಹೂಡಿಕೆ ಮಾಡಬೇಕಾಗಬಹುದು ಎಂಬುದಾಗಿಯೂ ಮೂಲ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News